ದಾವಣಗೆರೆ: ತಾಲೂಕಿನ ಅತ್ತಿಗೆರೆ ಗ್ರಾಮದ ಬಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸಿರುಗುಪ್ಪ ಗ್ರಾಮದ ವಿಜಯ್ ಭಜಂತ್ರಿ (30), ಬಸವರಾಜ ಐಬಟ್ಟಿ (30) ಮತ್ತು ಶ್ರೀಧರ್ ವಡ್ಡರ (27) ಎಂದು ಗುರುತಿಸಲಾಗಿದೆ. ಗಾಯಗೊಂಡ ವಿಶ್ವನಾಥ ಐರೆ ಗೌಡ (30) ಮತ್ತು ರಾಜು ಕಾಟ್ಕರ್ (30) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವಾಸಕ್ಕೆ ಹೋಗಿದ್ದ ಸ್ನೇಹಿತರ ಗುಂಪೊಂದು ಕಾರಿನಲ್ಲಿ ಬೆಳಗಾವಿಗೆ ಹಿಂತಿರುಗುತ್ತಿದ್ದಾಗ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮಾಯಕೊಂಡ ಪೊಲೀಸರು ತಿಳಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನೊಂದು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.