ಹೊನ್ನಾವರ: ತಾಲ್ಲೂಕಿನ ಸಾಲ್ಕೋಡ್ ಗ್ರಾ.ಪಂ.ನ ಕೊಂಡಾಕುಳಿಯಲ್ಲಿ ನಡೆದ ಹಿಂಸಾತ್ಮಕವಾಗಿ ಗೋಹತ್ಯೆ ಕೃತ್ಯ ಸಂಭಂದಿಸಿದಂತೆ ಕೊಂಡಾಕುಳಿ ಭಾಗದ ಗುಡ್ಡದ ಭಾಗದಲ್ಲಿ ಎಸ್ಪಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದರು. ಸುತ್ತಮುತ್ತಲಿನ ಮನೆಗಳಲ್ಲಿ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿದರು. ಈ ವೇಳೆ ಗೋವಿನ ಮಾಲೀಕರಾದ ಕೃಷ್ಣ ಆಚಾರಿಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿ, ಅಪರಾಧಿಗಳು ಯಾರೇ ಆದರು ಅವರನ್ನು ಬಂಧಿಸಿ, ಕಾನೂನು ಪ್ರಕಾರ ಕೈಗೊಳ್ಳುತ್ತೇವೆ ಇಲಾಖೆಯ ಮೇಲೆ ವಿಶ್ವಾಸವಿಡುವಂತೆ ಮನವಿ ಮಾಡಿದರು.
ನಂತರ ಘಟನೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿ, ಕೊಂಡಾಕುಳಿಯಲ್ಲಿ ಹೀನಕೃತ್ಯ ನಡೆದಿದೆ. ಇಲಾಖೆಯ ಅಧಿಕಾರಿಗಳು ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಗೋವಿನ ಹತ್ಯೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಪತ್ತೆ ಹಚ್ಚಲು ಹೊನ್ನಾವರ, ಕುಮಟಾ, ಮುರ್ಡೇಶ್ವರ ಸಬ್ ಇನ್‌ಸ್ಪೆಕ್ಟರ್, ಭಟ್ಕಳ ಡಿವೈಎಸ್ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗಾಗಿ ಬಲೆಬೀಸಿದ್ದೇವೆ. ಶಂಕಿತ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಘಟನೆ ನಡೆದ ಸುತ್ತಮುತ್ತಲಿನ ಸ್ಥಳದಿಂದ ಸಿಸಿಕ್ಯಾಮರಾ ಹಾಗೂ ಮೊಬೈಲ್ ಲೊಕೇಶನ್, ಸಂಬಂಧಿಸಿದಂತೆ ಇನ್ನಿತರ ಮಾಹಿತಿ ಕಲೆಹಾಕಿದ್ದು, ತನಿಖೆ ಚುರುಕುಗೊಳಿಸಿದ್ದೇವೆ. ಯಾರೇ ಆರೋಪಿ ಇದ್ದರೂ ಬಂಧಿಸಿ ಕಾನೂನು ಮುಂದೆ ನಿಲ್ಲಿಸುತ್ತೇವೆ. ವಿವಿಧ ಆಯಾಮದಲ್ಲಿ ತನಿಖೆ ನಡೆಯುತ್ತಿರುವುದರಿಂದ ಸಾರ್ವಜನಿಕರು ತಮ್ಮ ಬಳಿ ಇರುವ ಮಾಹಿತಿಯನ್ನು ಇಲಾಖೆಯವರೊಂದಿಗೆ ಹಂಚಿಕೊಳ್ಳಿ ಎಂದರು.