ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಈ ಬಾರಿ ಸಂಗ್ರಹವಾದ ಕಾಣಿಕೆ ಹಣ ಬರೋಬ್ಬರಿ 1 ಕೋಟಿ ಮೀರಿದೆ. ಈ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಹುಲಿಗೆಮ್ಮ ದೇವಿ ಕೋಟಿ ಒಡೆಯಳಾಗಿದ್ದಾಳೆ.
ಹುಲಿಗೆಮ್ಮ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಗಳ ಎಣಿಕೆ ಕಾರ್ಯ ನಡೆಯಿತು. ಸುಮಾರು 55 ದಿನಗಳಲ್ಲಿ ಬರೋಬ್ಬರಿ 1.12 ಕೋಟಿ ರೂಪಾಯಿ ಭಕ್ತರಿಂದ ಕಾಣಿಕೆಯಾಗಿ ದೇವಿಯ ಹುಂಡಿ ಸೇರಿದೆ. ಜೊತೆಗೆ 134 ಗ್ರಾಂ ಬಂಗಾರ, 10 ಕೆಜಿ ಬೆಳ್ಳಿ ಆಭರಣಗಳು ಸಹ ದೇವಿಯ ಸಂಗ್ರಹವನ್ನು ಸೇರಿವೆ.
ಹುಲಿಗೆಮ್ಮ ದೇವಿ ಕೇವಲ ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಗಳಲ್ಲಿ ಭಕ್ತರನ್ನು ಹೊಂದಿದ್ದಾಳೆ. ವಿಶೇಷವಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಹುತೇಕ ಪ್ರತಿ ತಿಂಗಳು ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಕೋಟಿಗಟ್ಟಲೆ ಕಾಣಿಕೆ ಹಣ ಭಕ್ತರಿಂದ ಸಂಗ್ರಹವಾಗುತ್ತಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.