ಹಳಿಯಾಳ: ತಾಲೂಕಿನ ಅಜಮನಾಳ ಹತ್ತಿರದ ಪಾಂಡ್ರವಾಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಾನಿ ಮರ ಕಳ್ಳತನ ನಡೆಸುತ್ತಿದ್ದ 14 ಜನ ಆರೋಪಿಗಳ ಪೈಕಿ, ಹತ್ತು ಜನರನ್ನು ವಶಕ್ಕೆ ಪಡೆದು, ಕಳ್ಳತನ ಮಾಡಲಾದ ಸಾಗುವಾನಿ ಮರದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾದ ವಾಹನಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿಯಡಿ ಪಾಂಡ್ರವಾಳ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಸಾಗುವಾನಿ ಮರ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಒಟ್ಟು 0.672 ಘನ ಮೀಟರಿನ ಸಾಗುವಾನಿ ಮರದ 14 ತುಂಡುಗಳನ್ನು, 01 ಗರಗಸ, 8 ಮೊಬೈಲ್ ಹಾಗೂ ಈ ಕೃತ್ಯಕ್ಕೆ ಬಳಸಲಾದ ಕೆಎ 63, 1400 ಸಂಖ್ಯೆಯ ಬೊಲೆರೋ ಪಿಕಪ್ ವಾಹನ, ಕೆಎ:22, ಎಂ ಡಿ: 2401 ಸಂಖ್ಯೆಯ ಸಿಫ್ಟ್ ಕಾರು, ಕೆಎ:19, ಇಡಿ:3337 ಸಂಖ್ಯೆಯ ಮತ್ತು ಕೆಎ: 65, ಕೆ: 1992 ಸಂಖ್ಯೆಯ ಒಟ್ಟು ಎರಡು ದ್ವಿಚಕ್ರ ವಾಹನಗಳನ್ನು ಹಾಗೂ 08 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಜಪ್ತು ಮಾಡಲಾದ ವಸ್ತುಗಳ ಮೌಲ್ಯ 10 ಲಕ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ 14 ಜನರ ಪೈಕಿ ಹಳಿಯಾಳ ತಾಲೂಕಿನ ಮುರ್ಕವಾಡದ ಇಬ್ಬರನ್ನು ಹಾಗೂ ಬೆಳಗಾವಿ ಜಿಲ್ಲೆಯ ಎಂಟು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಪ್ರಮುಖ ಆರೋಪಿ ಸಾಗರ್ ಸೇರಿದಂತೆ ನಾಲ್ವರನ್ನು ಬಂಧಿಸಲು ಶೋಧ ಕಾರ್ಯ ಮುಂದುವರಿಸಲಾಗಿದೆ
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್.ಕೆ.ಸಿ ಅವರ ನಿರ್ದೇಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಜಿ ಬೀರಪ್ಪ ಅವರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ್ ಅವರವ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಪೂಜಾರಿ, ಚಿದಾನಂದ ಬಡಿಗೇರ, ಷಣ್ಮುಖ ಹವಳಗಿ, ಮಹಾಂತೇಶ್ ಬಳಬಟ್ಟಿ, ಹನುಮಂತ ಚೌಗುಲಾ, ಅರಣ್ಯ ಪಾಲಕರಾದ ವಿಠ್ಠಲ್ ಶೋಧನ್ನವರ, ರೇವಣಸಿದ್ದ, ಸಲೀಂ ರೋಣದ್, ಈರಪ್ಪ ಹೊಂಗಲ್, ವಿನಾಯಕ ಸೊಲಬಣ್ಣವರ ಹಾಗೂ ಜೆ.ಹೆಚ್. ಮುಲ್ಲಾ ಇವರು ಭಾಗವಹಿಸಿದ್ದರು.