ಕುಮಟಾ: ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನಲೆ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತುಪಡಿಸಿದ ಘಟನೆ ಕುಮಟಾದಲ್ಲಿ ನಡೆದಿದೆ. ಉದಯ ಬಾಳಗಿ ಎಂಬುವವರಿಗೆ ಪರಿಹಾರ ನೀಡದ ಹಿನ್ನಲೆ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ.
ತಾಲ್ಲೂಕಿನ ಗುಂಡಬಾಳ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗೆ ಉದಯ ಬಾಳಗಿ ಎಂಬುವವರು 4 ಗುಂಟೆ ಜಾಗವನ್ನು ನೀಡಿದ್ದರು. ಇದಕ್ಕೆ ಪರಿಹಾರವಾಗಿ 10,58,295 ರೂಪಾಯಿಗಳನ್ನು ಘೋಷಣೆ ಮಾಡಿದ್ದು ಪರಿಹಾರ ನೀಡುವಲ್ಲಿ ಕುಮಟಾ ಉಪವಿಭಾಗಾಧಿಕಾರಿ ವಿಫಲವಾಗಿದ್ದರು.
ಈ ಹಿನ್ನಲೆ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಬೇಡಿಕೆಯಿಟ್ಟು ಉದಯ ಬಾಳಗಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯ ಪರಿಹಾರ ನೀಡದ ಕಾರಣಕ್ಕೆ ಕುಮಟಾ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತು ಪಡಿಸಲು ಆದೇಶಿಸಿದ್ದು, ಅದರಂತೆ ಕಚೇರಿಯಲ್ಲಿದ್ದ ಕಂಪ್ಯೂಟರ್, ಝೆರಾಕ್ಸ್ ಯಂತ್ರ ಸೇರಿ ಪೀಠೋಪಕರಣಗಳನ್ನು ಜಪ್ತುಪಡಿಸಲಾಯಿತು.