ಕೊಪ್ಪಳ: ಬರದ ನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಸಿಗುತ್ತಿದೆ. ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರವಾಸ ಮಾಡಿದ ಹೆಮ್ಮೆಯ ಘಟನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಸರಕಾರಿ ಶಾಲಾ ವಿದ್ಯಾರ್ಥಿಗಳೇ ವಿಮಾನದಲ್ಲಿ ಪ್ರಯಾಣ ಕೈಗೊಂಡವರಾಗಿದ್ದಾರೆ. ಕೊಪ್ಪಳದ ಮುಂಡರಗಿ ಹ್ಯಾಟಿ ಶಾಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರವಾಸ ಮಾಡಿ ಖುಷಿಪಟ್ಟಿದ್ದಾರೆ. ಗ್ರಾಮದ ಮುಖಂಡರು, ಶಾಲಾ ಶಿಕ್ಷಕರು, ಮುಖ್ಯಗುರುಗಳ ಹಾಗೂ ಪಾಲಕರ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಲಭಿಸಿದಂತಾಗಿದೆ.
ಶಾಲೆಯ ಮುಖ್ಯ ಗುರು ವಿಜಯ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಮಾನಯಾನದ ಅನುಭವವನ್ನು ಪಡೆದುಕೊಂಡರು. ಈ ವೇಳೆ ಖುಷಿ ಖುಷಿಯಾಗಿ ವಿಮಾನ ಪ್ರವಾಸದಲ್ಲಿ ಪುಟ್ಟ ಮಕ್ಕಳು ಭಾಗಿಯಾಗಿದ್ದು, ಬಳಿಕ ಫೋಟೋ ತೆಗೆಸಿಕೊಂಡು ವಿಮಾನಯಾನವನ್ನು ಸವಿನೆನಪಿನ ಬುಟ್ಟಿಯಲ್ಲಿ ಸಂಗ್ರಹಿಸಿಕೊಂಡರು.




