ಬೆಂಗಳೂರು: ಪೂರ್ವ ಬೆಂಗಳೂರಿನ ಮಹಾದೇವಪುರದ ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಯಾವುದೇ ಮಾನವ ಪ್ರಾಣಹಾನಿ ವರದಿಯಾಗಿಲ್ಲ.
ನಿನ್ನೆ ರಾತ್ರಿ 8.40ರ ಸುಮಾರಿಗೆ ನಾರಾಯಣಪುರ ಬಳಿಯ ಟ್ರಂಫ್ ಶೋ ರೂಂನಲ್ಲಿ ಈ ಘಟನೆ ನಡೆದಿದೆ. ವೈಟ್ಫೀಲ್ಡ್, ಹೊಸ್ಕೋಟೆ ಮತ್ತು ಮೇಯೊ ಹಾಲ್ ನಿಲ್ದಾಣಗಳಿಂದ ಮೂರು ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸಲು ಕರೆಸಲಾಯಿತು ಮತ್ತು ಮೂರು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಂದಿಸಲಾಯಿತು.
ಅಗ್ನಿಶಾಮಕ ದಳದ ಮೂಲಗಳ ಪ್ರಕಾರ, ಶೋರೂಂ ಒಳಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅಪಘಾತ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಾಗ ಶೋರೂಂ ಬಾಗಿಲು ಹಾಕಿತ್ತು. ಇದು ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ಹರಡಲು ಕಾರಣವಾಯಿತು. ಸಮೀಪದ ಅಂಗಡಿಯವನೊಬ್ಬ ಶೋ ರೂಂನಿಂದ ದಟ್ಟವಾದ ಹೊಗೆಯನ್ನು ಗಮನಿಸಿದಾಗ ಮಾತ್ರ ಇದು ಬೆಳಕಿಗೆ ಬಂದಿತು. ಮಹಾದೇವಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ಅವಘಡದ ವರದಿಯನ್ನು ಪಡೆದರು.