ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅನಮೋಡ್ ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಚಾಲಕನ ಸಹಿತ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಂ.ಹೆಚ್ 43, ಸಿಕೆ 5870 ನೋಂದಣಿಯ ಟಾಟಾ ಕಂಪನಿಯ ಗೂಡ್ಸ್ ಕ್ಯಾರಿಯರ್ ಕಂಟೇನರ್ ಲಾರಿ, ಗೋವಾ ರಾಜ್ಯದ ಫೋಂಡಾದಿಂದ ಮುಂಬೈಗೆ ಹೊರಟಿತ್ತು. ಇದರಲ್ಲಿ ಪೇಂಟ್ ತುಂಬಿದ್ದ 81 ಬಾಕ್ಸ್‌ಗಳು ಮತ್ತು 374 ಡ್ರಮ್‌ಗಳನ್ನು ಸಾಗಿಸಲಾಗುತ್ತಿತ್ತು. ತಪಾಸಣೆ ವೇಳೆ ಅನುಮಾನಗೊಂಡ ಅಬಕಾರಿ ಸಿಬ್ಬಂದಿ ಡ್ರೈವರ್ ಕ್ಯಾಬಿನ್ ಒಳಗೆ ಪರೀಕ್ಷಿಸಿದಾಗ, ಕ್ಯಾಬಿನ್ ಮೇಲೆ ಗುಪ್ತ ಕಂಪಾರ್ಟಮೆಂಟ್ ಇರುವುದು ಪತ್ತೆಯಾಗಿದೆ.
ಇದರಲ್ಲಿ ರಾಯಲ್ ಗ್ರೀನ್ ವಿಸ್ಕಿಯ 750 ಎಂ.ಎಲ್.ನ 20 ಪೆಟ್ಟಿಗೆ ಮತ್ತು ಓಕ್ಸ್ಮಿತ್ ಗೋಲ್ಡ್ ವಿಸ್ಕಿಯ 750 ಎಂಎಲ್ ನ 10 ಪೆಟ್ಟಿಗೆ ಮದ್ಯ ಪತ್ತೆಯಾಗಿದೆ. ಗೋವಾ ಮದ್ಯವನ್ನು ಅನಧಿಕೃತವಾಗಿ ಮುಂಬೈ ವ್ಯಾಪ್ತಿಯ ಭೀವಂದಡಿಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿಕೊಂಡ ಅಬಕಾರಿ ಸಿಬ್ಬಂದಿ, ಆರೋಪಿ ಮಹಾರಾಷ್ಟ್ರ ಮೂಲದ ಲಾರಿ ಚಾಲಕ ಭವನ ಬಿನ್ ಮುರಾಜಿ ಗಾಂಧಿ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಪ್ತುಪಡಿಸಿದ ವಾಹನದ ಅಂದಾಜಿನ ಬೆಲೆ 22 ಲಕ್ಷ ರೂ. ಗಳಾಗಿದ್ದು, ಬರ್ಜರ್ ಪೇಂಟಿನ ಬೆಲೆ 3.75 ಲಕ್ಷ ರೂ. ಹಾಗೂ ಜಪ್ತುಪಡಿಸಿದ ಮಧ್ಯದ ಅಂದಾಜಿನ ಬೆಲೆ 3.66 ಲಕ್ಷ ರೂ. ಗಳಾಗಿರುತ್ತವೆ.
ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದ ಮೇರೆಗೆ, ಮಹೇಂದ್ರ ಎಸ್ ನಾಯ್ಕ ಅಬಕಾರಿ ನಿರೀಕ್ಷಕರು, ಟಿ ಬಿ ಮಲ್ಲಣ್ಣನವರ್ ಅಬಕಾರಿ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ್ ಜಾಧವ್ ದೀಪಕ್ ಬಾರಾಮತಿ, ಮಹಾಂತೇಶ ಹೊನ್ನೂರ್, ಶ್ರೀಶೈಲ್ ಹಡಪದ್ ಮತ್ತು ಪ್ರವೀಣ್ ಹೊಸಕೋಟಿ ಇವರುಗಳು ಈ ಅಕ್ರಮ ಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.