ಚನ್ನಪಟ್ಟಣ: ಕೇಂದ್ರ ಸಚಿವ ಏಚ್.ಡಿ. ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಬಂದಿಲ್ಲ. ಮೊನ್ನೆ 150 ಕೆರೆ ತುಂಬಿಸಿದ್ದೇವೆ ಅಂತಿದ್ರು. ಅಷ್ಟಕ್ಕೂ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಟೀಕೆ ಮಾಡಿದ್ದಾರೆ.
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಇದು ನನ್ನ 10ನೇ ಚುನಾವಣೆ. ಈ ಉಪಚುನಾವಣೆ ಬರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿ ರಾಜಕೀಯ ಮಹತ್ವಾಕಾಂಕ್ಷೆಯಿಂದ ಬೈಎಲೆಕ್ಷನ್ ಬಂತು. ಎಂಎಲ್ಎ ಆಗಿ ಕ್ಷೇತ್ರಕ್ಕೆ ಬಂದಿಲ್ಲ ಅವರು. ಮೊನ್ನೆ 150 ಕೆರೆ ತುಂಬಿಸಿದ್ದೇವೆ ಅಂತಿದ್ರು. ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ. ಕುಮಾರಸ್ವಾಮಿ ಎರಡು ಬಾರಿ ಗೆದ್ರೂ ಒಂದು ಕೆರೆ ತುಂಬಿಸಲಿಲ್ಲ ಎಂದು ಆರೋಪ ಮಾಡಿದ್ದಾರೆ.
ನಾನು, ಸುರೇಶ್ ಸೇರಿ ಒಂದು ಹೊಸ ಯೋಜನೆ ಬಗ್ಗೆ ಆಲೋಚನೆ ಮಾಡಿದ್ದೇವೆ. KRS ನಿಂದ ಮಾರ್ಕೋನಹಳ್ಳಿ ಡ್ಯಾಂಗೆ ನೀರು ತಂದು ಅದನ್ನ ಕಣ್ವ, ಇಗ್ಗಲೂರು ಡ್ಯಾಂಗೆ ತರಬಹುದು ಎಂದರು.
ಶಿವಲಿಂಗೇಗೌಡರಿಗೆ ಅವರ ಎಲ್ಲಾ ಮರ್ಮಗಳು ಗೊತ್ತು. ಅವರ ಫ್ಲಾನ್ ಗಳು ನಮ್ಮ ಬಹುತೇಕ ನಾಯಕರಿಗೆ ಗೊತ್ತು. ನನ್ನ ಮೇಲೆ ಯಾಕಿಂಗೆ ಅವರ ಮನೆಯವರು ಮುಗಿಬಿಳ್ತಿದ್ದಾರೋ ಗೊತ್ತಿಲ್ಲ. ನಾನೇನು ತಪ್ಪುಮಾಡಿದ್ದೀನಿ, ನನ್ನ ಮೇಲೆ ಯಾಕೆ ಹೀಗೆ ಬಿಳ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಎಚ್ಡಿಕೆ ಬಳಿ ಯಥೇಚ್ಛವಾಗಿ ಹಣವಿದೆ:
ಮೊನ್ನೆ 500 ಬಸ್ ಮಾಡಿ ಜನ ಸೇರಿಸಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ ಎಷ್ಟಾದ್ರೂ ಹಣ ತಂದು ಚುನಾವಣೆ ಮಾಡೋಕೆ ನಿಂತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಈಗ ಚುನಾವಣಾ ಆಯೋಗ ಕೇಸ್ ಹಾಕಿ 96 ಬಸ್ ಸೀಜ್ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಕುಮಾರಸ್ವಾಮಿಗೆ ಇರೋದು ಒಂದೇ ಅಸ್ತ್ರ. ಯಥೇಚ್ಛವಾಗಿ ಹಣ ಸುರಿದು ಚುನಾವಣೆ ಮಾಡೋದು. ನನ್ನ ಬಳಿ ಅಷ್ಟು ಹಣ ಇಲ್ಲ, ಎರಡು ಬಾರಿ ಸೋತಿದ್ದೇನೆ. ಜನರೇ ನನ್ನ ಪರವಾಗಿ ಚುನಾವಣೆ ಮಾಡ್ತಾರೆ ಎಂದು ಹೇಳಿದರು.