ಚಾಮರಾಜನಗರ: ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ, ಕಿವಿ ಚುಚ್ಚಿಸುವಾಗ ನೋವು ಉಂಟಾಗದಂತೆ ಅನಸ್ತೇಶಿಯಾ ನೀಡಿದ ಪರಿಣಾಮ 6 ತಿಂಗಳ ಮಗುವೊಂದು ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಮಗುವಿನ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.
ತಾಲೂಕಿನ ಹಂಗಲ ಗ್ರಾಮದ ಆನಂದ-ಶುಭ ದಂಪತಿ ತಮ್ಮ 6 ತಿಂಗಳ ಮಗುವಿನ ಕಿವಿ ಚುಚ್ಚಿಸಲು ಅನಸ್ತೇಶಿಯಾ ಕೊಡಿಸಲು ಬೊಮ್ಮಲಾಪುರ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ. ನಾಗರಾಜು ಅವರು ಮಗುವಿನ ಎರಡೂ ಕಿವಿಗಳಿಗೆ ಅನಸ್ತೇಶಿಯಾ ಇಂಜೆಕ್ಷನ್ ನೀಡಿದ ನಂತರ ಮಗು ಔಷಧದ ಓವರ್‌ಡೋಸ್ ಆದ ಪರಿಣಾಮ ಬಾಯಿಯಿಂದ ನೊರೆ ಬಂದು ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇಂಜೆಕ್ಷನ್ ನಂತರ ಮಗುವಿಗೆ ಫಿಟ್ಸ್ ಬಂದು ಮೃತಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.