ಯಲ್ಲಾಪುರ: ಮನೆಯ ಗೋಡೆ ಕೊರೆದು ಲಕ್ಷಾಂತರ ಮೌಲ್ಯದ ಅಡಿಕೆ ಕದ್ದೊಯ್ದಿದ್ದ ಕಳ್ಳನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜುನಾಥ ಮಹೇಶ ಸಿದ್ದಿ(20) ಬಂಧಿತ ಆರೋಪಿಯಾಗಿದ್ದಾನೆ.
ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ನಿವಾಸಿ ಗೋಪಾಲಕೃಷ್ಣ ನಾಗೇಶ ಭಾಗವತ್ ಎಂಬುವವರ ಮನೆಯಲ್ಲಿ ಕಳೆದ ಅಕ್ಟೋಬರ್ 8 ರಿಂದ 14ರ ನಡುವೆ ಅಡಿಕೆ ಕಳ್ಳತನ ನಡೆದಿತ್ತು. ಮನೆಯ ಹಿಂಬದಿ ಗೋಡೆ ಕೊರೆದು, ಮನೆಯಲ್ಲಿದ್ದ ಸುಮಾರು 3.60 ಲಕ್ಷ ಮೌಲ್ಯದ 20 ಕ್ವಿಂಟಾಲ್ ಒಣ ಅಡಿಕೆಯನ್ನು ಯಾರೋ ಅಪರಿಚಿತರು ಕದ್ದೊಯ್ದಿದ್ದಾಗಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಮಾಲೀಕ ಗೋಪಾಲಕೃಷ್ಣ ದೂರು ದಾಖಲಿಸಿದ್ದರು.
ಅದರಂತೆ ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ, ಯಲ್ಲಾಪುರ ಪಿಐ ರಮೇಶ ಹನಾಪುರ ನೇತೃತ್ವದಲ್ಲಿ, ಪಿಎಸ್ಐ ಶೇಡಜಿ ಚೌಹಾಣ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ನಸೀನ್ ತಾಜ್ ತನಿಖೆ ಕೈಗೊಂಡಿದ್ದರು. ಅದರಂತೆ ಆರೋಪಿತನನ್ನು ಪತ್ತೆ ಮಾಡಿ ವಿಚಾರಣೆ ಮಾಡಿದಾಗ ತನ್ನ ಸಹಚರರೊಂದಿಗೆ ಕಳ್ಳತನ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದರಿ ಆರೋಪಿತನಿಂದ, ಸುಮಾರು 7 ಗೊಬ್ಬರ ಚೀಲದಲ್ಲಿ ಇರಿಸಲಾಗಿದ್ದ 1 ಕ್ವಿಂಟಾಲ್ 92 ಕೆಜಿ, 740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.