ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಜಾಲಿಬೆಂಚಿ ಕ್ರಾಸ್ ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಶನಿವಾರ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ಘಟಕದಲ್ಲಿ ಉತ್ಪಾದನಾ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿದರು. ಉತ್ಪಾದನಾ ಘಟಕದ ಕಾರ್ಯನಿರತ ಮಹಿಳೆಯರಿಂದಲೇ ಆಹಾರ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಅಂಗನವಾಡಿಗಳಿಗೆ ಪೂರೈಕೆ ಮಾಡುವ ಆಹಾರ ಸಾಮಗ್ರಿಗಳಲ್ಲಿ, ಅದರಲ್ಲೂ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಸಚಿವರು ಸೂಚಿಸಿದರು.
ಇದೇ ವೇಳೆ, ಪುಷ್ಟಿ ನ್ಯೂಟ್ರಿಮಿಕ್ಸ್, ಗೋಧಿ ನುಚ್ಚು ಹಾಲಿನ ಪುಡಿ, ಅರಿಶಿಣ ಪುಡಿ ಇತ್ಯಾದಿ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿದರಲ್ಲದೇ, ಉತ್ಪಾದನಾ ಆಹಾರ ಸಮಗ್ರಗಳ ಬಗ್ಗೆ ಸ್ಥಳದಲ್ಲಿದ್ದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಿಂದ ಮಾಹಿತಿ ಪಡೆದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಬಿ.ಎಚ್ ನಿಶ್ಚಲ್, ಇಲಾಖೆಯ ಉಪ ನಿರ್ದೇಶಕ ಕೆ. ಹೆಚ್. ವಿಜಯಕುಮಾರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.