Heavy rain | ಕರ್ನಾಟಕದಲ್ಲಿ ಮತ್ತೆ ಮಳೆ ಚಟುವಟಿಕೆ ಸಕ್ರಿಯಗೊಂಡಿದ್ದು, ಹವಾಮಾನ ಇಲಾಖೆ ರಾಜ್ಯದ 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಹೌದು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳು ಉಗ್ರವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದ೦ತೆ ಎಚ್ಚರಿಕೆ ನೀಡಲಾಗಿದೆ..
25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆಯಿದೆ. ಅದೇ ವೇಳೆ ಬಾಗಲಕೋಟೆ, ಬೀದರ್, ಕಲಬುರ್ಗಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಭಾಗಶಃ ಒಣಹವೆಯ ಪ್ರಭಾವ ಇರಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.
ಬಿರುಗಾಳಿ ಸಹಿತ ಮಳೆ
ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು ಭಾಗಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ರಾಜಧಾನಿಯಲ್ಲೂ ಮಳೆ
ರಾಜಧಾನಿ ಬೆಂಗಳೂರು ನಗರದಲ್ಲೂ ಇಂದು ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆ ಇದೆ. ನಗರದಲ್ಲಿ ಶೇ.80ರಿಂದ 100ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಗಾಳಿಯ ವೇಗ ಗಂಟೆಗೆ 14-20 ಕಿ.ಮೀ ಇರಲಿದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿಯ ಮಟ್ಟದಲ್ಲಿರಲಿದೆ ಎ೦ದು ಹವಾಮಾನ ಇಲಾಖೆ ತಿಳಿಸಿದೆ.




