ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ‘2ಎ’ಗೆ ಸೇರಿಸುವ ಬಗ್ಗೆ ನಿರ್ಣಯ ಕೈಗೊಳ್ಳದೇ ಇದ್ದರೆ, ರಾಜ್ಯದ ವೀರಶೈವ ಲಿಂಗಾಯತರು ಯಡಿಯೂರಪ್ಪ ಅವರ ನಾಟಕ ಕಂಪನಿಯನ್ನು ಬಂದ್ ಮಾಡಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ಮಾರ್ಚ್ ತಿಂಗಳಲ್ಲಿ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳದೇ ಇದ್ದರೆ, ಸಚಿವರಾದ ಸಿ.ಸಿ.ಪಾಟೀಲ್ ಮತ್ತು ನಿರಾಣಿ ಅವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ. ಇನ್ನು ಪಂಚಮಸಾಲಿಗಳನ್ನು ‘3ಬಿ’ ಪಟ್ಟಿಗೆ ಸೇರಿಸಿದ್ದು ತಾವು ಎಂದು ಯಡಿಯೂರಪ್ಪ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ‘3ಬಿ’ ಮೀಸಲಾತಿಯನ್ನು ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಲಾಗಿದೆಯೇ ಹೊರತು ಕೇವಲ ಪಂಚಮಸಾಲಿ ಸಮುದಾಯಕ್ಕಲ್ಲ ಎಂದು ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.