ಯಾದಗಿರಿ: ಅನೈತಿಕ ಸಂಬಂಧದ ಆರೋಪ ಬಂದಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತಡಬಿಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ತಡಿಬಿಡಿ ಗ್ರಾಮದ ನಬಿರಸೂಲ್ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ನಬಿರಸೂಲ್ ತಡಿಬಿಡಿ ಗ್ರಾಮದ ಅನಂತಮ್ಮ ಎಂಬುವವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗಿ ಆರೋಪ ಕೇಳಿಬಂದಿದ್ದು, ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆ ನಬಿರಸೂಲ್ ನನ್ನು ಮಹಿಳೆ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದರು. ಇದಾದ ಬಳಿಕ ಬುಧವಾರ ಮನೆಯಿಂದ ಹೊರಹೋಗಿದ್ದ ನಬೀರಸೂಲ್ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ಆತಂಕಕ್ಕೀಡಾಗಿದ್ದ ನಬೀರಸೂಲ್ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದರಾದ್ರೂ ಆತನ ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಆದರೆ ಇವತ್ತು ತಡಬಿಡಿ ಗ್ರಾಮದ ಹೊರಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಬೀರಸೂಲ್ ಶವ ಪತ್ತೆಯಾಗಿದೆ. ಜೊತೆಗೆ ಶವದ ಬಳಿಯಿಂದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ, ಅನಂತಮ್ಮ ಪತಿ ದುರ್ಗಪ್ಪ, ಸಾಬಣ್ಣ, ಮಲ್ಲಪ್ಪ, ಹನುಮಂತ ಹಾಗೂ ರೇಣುಕಾ ಎಲ್ಲರೂ ಸೇರಿ ಹೊಡೆದಿದ್ದಾರೆ. ಈ ಕಾರಣಕ್ಕೆ ಸಾಯುತ್ತಿದ್ದೇನೆ ಎಂದು ಎಲ್ಲರ ಹೆಸರು ಬರೆದಿಟ್ಟ ನಬಿರಸೂಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಲ್ಲದೇ ನಾನು ಯಾವುದೇ ಅನೈತಿಕ ಸಂಬಂಧ ಹೊಂದಿಲ್ಲ. ಆದರೂ ಶಂಕೆ ವ್ಯಕ್ತಪಡಿಸಿ ಹೊಡೆದಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ನಬೀರಸೂಲ್ ಉಲ್ಲೇಖಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.