ವಿಶಾಖಪಟ್ಟಣ: ಕೊಳಕು ಟಾಯ್ಲೆಟ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಪ್ರಯಾಣಿಕನಿಗೆ ₹30 ಸಾವಿರ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಾ ಗ್ರಾಹಕರ ಕೋರ್ಟ್, ರೈಲ್ವೆ ಇಲಾಖೆಯನ್ನು ಆದೇಶಿಸಿದೆ.
‘ತಿರುಪತಿಯಿಂದ ದುವ್ವಾಡ ವರೆಗೂ ಪ್ರಯಾಣಿಸಿದ ವ್ಯಕ್ತಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ದೈಹಿಕವಾಗಿ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಆವರಿಗೆ 30 ಸಾವಿರ ರು. ಪರಿಹಾರ ನೀಡಬೇಕು’ ಎಂದು ಅದು ಸೂಚಿಸಿದೆ.
ಘಟನೆ ಹಿನ್ನೆಲೆ:
2023ರ ಜೂ.5 ರಂದು ವಿ. ಮೂರ್ತಿ ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಯಿಂದ ದುವ್ವಾಡಕ್ಕೆ ಹೋಗಲು ತಿರುಮಲ ಎಕ್ಸ್‌ಪ್ರೆಸ್ ರೈಲಿನಲ್ಲಿ 3ಎಸಿ ಟಿಕೆಟ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಬೋಗಿಯಲ್ಲಿ ಸರಿಯಾಗಿ ಎಸಿ ಕೆಲಸ ಮಾಡಿರಲಿಲ್ಲ. ಜತೆಗೆ ಶೌಚಾಲಯದಲ್ಲೂ ಸರಿಯಾಗಿ ನೀರು ಪೂರೈಕೆ ಆಗಿರಲಿಲ್ಲ. ಇದನ್ನು ರೈಲ್ವೆ ಇಲಾಖೆ ಸಿಬ್ಬಂದಿಯ ಗಮನಕ್ಕೆ ತಂದರೂ, ಅದಕ್ಕೆ ಕ್ಯಾರೇ ಎಂದಿರಲಿಲ್ಲ. ಇದನ್ನು ಮೂರ್ತಿ ಅವರು ಗ್ರಾಹಕರ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆ ವೇಳೆ ತಾಂತ್ರಿಕ ದೋಷದಿಂದ ಶೌಚಾಲಯದಲ್ಲಿ ನೀರು ನಿಂತಿದೆ ಎಂದು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಆದ್ದರಿಂದ ಗ್ರಾಹಕರ ಕೋರ್ಟ್ ಮೂರ್ತಿ ಅವರಿಗೆ 30 ಸಾವಿರ ರು. ಪರಿಹಾರ ನೀಡುವಂತೆ ಆದೇಶಿಸಿದೆ.