ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಸುತ್ತಮುತ್ತಲಿನವರು, ಆಪ್ತರು, ಕೃತ್ಯದ ಬಳಿಕ ಪರೋಕ್ಷವಾಗಿ ಆರೋಪಿಗಳಿಗೆ ಸಹಾಯವಾದವರು ಸೇರಿದಂತೆ ವಿವಿಧ ವ್ಯಕ್ತಿಗಳ ಹೇಳಿಕೆಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಿ ದರ್ಶನ್ ಹಣ ಪಡೆದುಕೊಂಡಿದ್ದ ಮೋಹನ್ ರಾಜ್, ಡೆವಿಲ್ ಸಿನಿಮಾದ ನಿರ್ಮಾಪಕ ಮಿಲನ ಪ್ರಕಾಶ್, ದರ್ಶನ್ ಅವರ ಕಾಸ್ಟ್ಯೂಮ್ ಡಿಸೈನರ್, ಮ್ಯಾನೇಜರ್, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನ ಶುಚಿಗೊಳಿಸಿದವರು ಹಾಗೂ ಪ್ರಕರಣದ 8ನೇ ಆರೋಪಿ ರವಿಶಂಕರ್ ಸ್ನೇಹಿತನ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಸಾಕ್ಷಿದಾರರನ್ನಾಗಿ ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್, ಕೃತ್ಯದ ಬಳಿಕ ಮೋಹನ್ ರಾಜ್ ಹಾಗೂ ಡೆವಿಲ್ ಸಿನಿಮಾದ ನಿರ್ಮಾಪಕ ಮಿಲನ ಪ್ರಕಾಶ್ ಅವರಿಂದ ಹಣ ಪಡೆದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.ಈಗಾಗಲೇ ಇಬ್ಬರನ್ನೂ ವಿಚಾರಣೆ ಮಾಡಿರುವ ಪೊಲೀಸರು, ಸಾಕ್ಷಿದಾರರನ್ನಾಗಿ ಪರಿಗಣನೆ ಮಾಡಿದ್ದು, ಪ್ರಕರಣದಲ್ಲಿ ಒಟ್ಟು 83.65 ಲಕ್ಷ ಹಣವನ್ನ ವಶಪಡಿಸಿಕೊಂಡಿದ್ದಾರೆ.ಅಲ್ಲದೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನವನ್ನ ಶುಚಿಗೊಳಿಸಿದ್ದ ಸರ್ವಿಸ್ ಸ್ಟೇಷನ್ ಕೆಲಸಗಾರರ ಹೇಳಿಕೆಯನ್ನೂ ದಾಖಲಿಸಲಾಗಿದ್ದು, ಕಾರಿನಲ್ಲಿ ರಕ್ತದ ಕಲೆಗಳಿದ್ದ ಬಗ್ಗೆ ಸಾಕ್ಷಿ ನುಡಿದಿದ್ದಾರೆ. ಸಾಕ್ಷ್ಯನಾಶಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಸಹ ಸಾಕ್ಷಿದಾರರನ್ನಾಗಿ ಮಾಡಲಾಗಿದೆ. ಸ್ನೇಹಿತನ ಬಳಿ ವೃತ್ತಾಂತ ಬಿಚ್ಚಿಟ್ಟಿದ್ದ ಆರೋಪಿ ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಕ್ಯಾಬ್ ಚಾಲಕ ರವಿಶಂಕರ್ ಸ್ನೇಹಿತನನ್ನ ಸಹ ಪ್ರಕರಣದ ಸಾಕ್ಷಿದಾರನನ್ನಾಗಿ ಪರಿಗಣಿಸಲಾಗಿದೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ನೆರವಾಗಿದ್ದ ರವಿಶಂಕರನನ್ನೇ ಆರೋಪಿಗಳು ಮೃತದೇಹ ಎಸೆಯಲು ಬಳಸಿಕೊಂಡಿದ್ದರು. ಪ್ರಕರಣದಲ್ಲಿ ದರ್ಶನ್ ಬಂಧನವಾಗುತ್ತಿದ್ದಂತೆ ಗಾಬರಿಗೊಳಗಾಗಿದ್ದ ರವಿಶಂಕರ್, ತನ್ನ ಸ್ನೇಹಿತನ ಬಳಿ ನಡೆದಿದ್ದೆಲ್ಲವನ್ನೂ ಹೇಳಿಕೊಂಡಿದ್ದ. ಸದ್ಯ ರವಿಶಂಕರ್ ಸ್ನೇಹಿತನ ಹೇಳಿಕೆ ದಾಖಲಿಸಿರುವ ಪೊಲೀಸರು, ಆತನನ್ನೂ ಸಹ ಪ್ರಕರಣ ಸಾಕ್ಷಿದಾರನನ್ನಾಗಿ ಪರಿಗಣಿಸಿದ್ದಾರೆ ಅಲ್ಲದೆ ದರ್ಶನ್ ಅವರ ಮ್ಯಾನೇಜರ್ ಹಾಗೂ ಕಾಸ್ಟ್ಯೂಮ್ ಡಿಸೈನರ್ ಹೇಳಿಕೆಯನ್ನ ಸಹ ದಾಖಲಿಸಿಕೊಂಡು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ. ಮೋಹನ್ ರಾಜ್ ಬಳಿ ಹಣದ ಸಹಾಯ ಕೇಳಲು ಮ್ಯಾನೇಜರ್ ಫೋನ್ ಮೂಲಕವೇ ದರ್ಶನ್ ಕರೆ ಮಾಡಿದ್ದರು. ಅಲ್ಲದೆ ಕೃತ್ಯದ ವೇಳೆ ದರ್ಶನ್ ಧರಿಸಿದ್ದ ಬಟ್ಟೆಗಳನ್ನ ಅವರ ಪತ್ನಿ ವಿಜಯಲಕ್ಷ್ಮಿ ಮನೆಗೆ ಕಾಸ್ಟ್ಯೂಮ್ ಡಿಸೈನರ್ ನೀಡಿದ್ದ.ಹೀಗಾಗಿ ಇಬ್ಬರನ್ನೂ ಸಹ ದರ್ಶನ್ ವಿರುದ್ದವೇ ಸಾಕ್ಷಿದಾರರನ್ನಾಗಿ ಮಾಡಲಾಗಿದೆ ಎಂಬುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಬಹಿರಂಗವಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment