ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಬ್ಯಾಗಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ನೂರಕ್ಕೂ ಅಧಿಕ ಜೀವಂತ ಗುಂಡುಗಳು ಪತ್ತೆಯಾಗಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಉತ್ತರ ಪ್ರದೇಶದ ಬಬ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದ ಛಪ್ರಾ ಕಡೆಗೆ ತೆರಳುತ್ತ ಪ್ಯಾಸೆಂಜರ್ ರೈಲಿನಲ್ಲಿ ಯುವತಿ ಜೀವಂತ ಗುಂಡುಗಳೊಂದಿಗೆ ಪ್ರಯಾಣಿಸುತ್ತಿದ್ದಳು.
ಈ ಬಗ್ಗೆ ಮಾಹಿತಿ ನೀಡಿದ ಬಲ್ಲಿಯಾ ಜಿಆರ್‌ಪಿ ಠಾಣೆಯ ಪ್ರಭಾರಿ ಸುಭಾಷ್ ಚಂದ್ರ ಯಾದವ್, ಸುಮಾರು 20 ವರ್ಷ ಪ್ರಾಯದ ಯುವತಿ ಬನಾರಸ್‌ನಿಂದ ಛಪ್ರಾಗೆ ತೆರಳುತ್ತಿದ್ದ ರೈಲು ಸಂಖ್ಯೆ 05446ನೇದರಲ್ಲಿ ಪ್ರಯಾಣಿಸುತ್ತಿದ್ದಳು. ಈಕೆಯ ಬಳಿ 0.315 ಬೋರ್‌ನ 750 ಕಾಟ್ರೆಡ್ಜ್ ಗುಂಡುಗಳನ್ನು ಸಾಗಿಸುತ್ತಿದ್ದಳು. ಯುವತಿಯ ಬಳಿ ಗುಂಡುಗಳು ಇರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಜಿಆರ್‌ಪಿ ಸರ್ಕಾರಿ ರೈಲ್ವೇ ಪೊಲೀಸ್ ಸಿಬ್ಬಂದಿ ತಂಡ ಯುವತಿಯನ್ನು ರೈಲು ನಿಲ್ದಾದಲ್ಲಿ ಬಂಧಿಸಿ ವಶಕ್ಕೆ ಪಡೆದುಕೊಂಡಿದೆ.
ಯುವತಿಯನ್ನು ಮಿರ್ಜಾಪುರ ಜಿಲ್ಲೆಯ ರಾಜ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ನಾದಿಹಾರ್ ಗ್ರಾಮದ ನಿವಾಸಿ ಮನಿತಾ ಸಿಂಗ್ ಎಂದು ಗುರುತಿಸಲಾಗಿದೆ. ವಾರಣಾಸಿಯಿಂದ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯ ಬ್ಯಾಗ್‌ನಲ್ಲಿ ಈ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಆರೋಪಿ ಬಾಲಕಿ ತಾನು ಕಾಟ್ರಿಡ್ಜ್‌ಗಳೊಂದಿಗೆ ಛಪ್ರಾಕ್ಕೆ ಹೋಗುತ್ತಿದ್ದುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಗಾಜಿಪುರದ ನಿವಾಸಿಗಳಾದ ಅಂಕಿತ್ ಕುಮಾರ್ ಪಾಂಡೆ ಮತ್ತು ರೋಷನ್ ಯಾದವ್ ಎಂಬ ಇಬ್ಬರು ವ್ಯಕ್ತಿಗಳು ಕಾಟ್ರಿಡ್ಜ್‌ಗಳನ್ನು ಚಪ್ರಾಗೆ ತಲುಪಿಸಲು ಕೇಳಿಕೊಂಡಿದ್ದರು ಎಂದು ಇನ್‌ಸ್ಪೆಕ್ಟರ್ ಯಾದವ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಕೂಲಕುಂಷ ತನಿಖೆ ನಡೆಸಲಾಗುತ್ತಿದ್ದು, ಅಂಕಿತ್ ಕುಮಾರ್ ಪಾಂಡೆ ಮತ್ತು ರೋಷನ್ ಯಾದವ್ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಠಾಣಾಧಿಕಾರಿ ಸುಭಾಷ್ ಚಂದ್ರ ಯಾದವ್ ತಿಳಿಸಿದ್ದಾರೆ.