ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ಅಬ್ಯನಡ್ಕದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಗೋವಾ ಮದ್ಯವನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣ ಸಂಬಂಧಿಸಿ ಓರ್ವ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಿ ಉಡುಪಿ ನಿವಾಸಿ ಪ್ರಶಾಂತ ಸುವರ್ಣ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಪ್ರಶಾಂತ ಅಬಕಾರಿ ದಾಳಿ ಬಳಿಕ ತಲೆಮರೆಸಿಕೊಂಡಿದ್ದು ಅಬಕಾರಿ ಅಧಿಕಾರಿಗಳು ಆರೋಪಿ ಪತ್ತೆಗೆ ಬಲೆಬೀಸಿದ್ದರು. ಈ ವೇಳೆ ಆರೋಪಿ ಕಾರವಾರದತ್ತ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕಾರವಾರದ ಬಸ್ ನಿಲ್ದಾಣದಲ್ಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಕರಣ ಸಂಬಂಧ ಇನ್ನೋರ್ವ ಆರೋಪಿ ಬೋಳ ಗ್ರಾಮದ ಅವಿನಾಶ್ ಮಲ್ಲಿ ಎಂಬುವವನಿಗಾಗಿ ಹುಡುಕಾಟ ಮುಂದುವರೆದಿದ್ದು, ತೀವ್ರ ಶೋಧ ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರಾದ ಬಿಂದುಶ್ರೀ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬೋಳ ಗ್ರಾಮದ ಅಬ್ಯನಡ್ಕದಲ್ಲಿನ ಅವನಿ ನಿಲಯ ಹಾಗೂ ಮರಿಮಾರು ಗುತ್ತು ಮನೆಯಲ್ಲಿ ಅಕ್ರಮವಾಗಿ 272 ಬಾಕ್ಸ್ಗಳಲ್ಲಿ ಬಚ್ಚಿಡಲಾಗಿದ್ದ ಸುಮಾರು 2360.850 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಿದ್ದರು. ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಈ ಪೈಕಿ ಓರ್ವನ ಬಂಧನವಾಗಿದೆ.