ನವದೆಹಲಿ: ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಹಿಂದೆ ಸರಿದಿದ್ದು, ಮತ್ತೊಂದೆಡೆ ಹಿಂಗಾರು ಮಾರುತಗಳು ಮಳೆ ಸುರಿಸಲು ಆರಂಭಿಸಿವೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಮೇ.30ರಂದು ಕೇರಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ ನೈಋತ್ಯ ಮಾನ್ಸೂನ್ ಜು.2ರ ಹೊತ್ತಿಗೆ ಇಡೀ ದೇಶವನ್ನು ವ್ಯಾಪಿಸಿದ್ದು, ಸೆ.23ರಂದು ವಾಯವ್ಯ ಭಾಗದಿಂದ ನಿರ್ಗಮಿಸಿದೆ. ಮುಂಗಾರು ಅವಧಿಯಲ್ಲಿ 934.8 ಮಿ.ಮೀನಷ್ಟು ಮಳೆಯಾಗಿದೆ. ಇದು ಸಾಮಾನ್ಯ ಸರಾಸರಿಯಾದ 868.6 ಮಿ.ಮೀಗಿಂತ ಹೆಚ್ಚಿದೆ. ಹಿಂಗಾರು ಮಾರುತಗಳ ಈಶಾನ್ಯ ರಾಜ್ಯಗಳಿಂದ ಆರಂಭವಾಗುತ್ತದೆ ಎಂದು ಐಎಂಡಿ ಹೇಳಿದೆ.
ಹೆಚ್ಚಾದರೆ ಅಪಾಯ:
ಪ್ರಸಕ್ತ ವರ್ಷದ ಮುಂಗಾರು ವಾಡಿಕೆಗಿಂತ ಹೆಚ್ಚು ಸುರಿದಿದ್ದು, ರಾಜಸ್ಥಾನ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಶೇ.7.6 ರಷ್ಟು ಹೆಚ್ಚು ಮಳೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆಯಾದಲ್ಲಿ ಭತ್ತ, ಬೇಳೆ, ತೈಲದ ಬೀಜ ಬೆಳೆ ಸೇರಿ ಮುಂಗಾರು ವೇಳೆ ಬೆಳೆದ ಬೆಳೆಗಳ ಕೊಯ್ಲು ಮಾಡಲು ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತದ ಒಟ್ಟು ಜಿಡಿಪಿಗೆ ಹೆಚ್ಚು ಕೊಡುಗೆ ನೀಡುವ ಕೃಷಿ ಕ್ಷೇತ್ರದ ಶೇಕಡಾ 70ರಷ್ಟು ಬೆಳೆಗಳು ಮುಂಗಾರು ಅವಧಿಯಲ್ಲಿಯೇ ಬೆಳೆಯಲಾಗುತ್ತದೆ. ಹಾಗಾಗಿ ಹಿಂಗಾರು ಅವಧಿಯಲ್ಲಿ ಅತಿವೃಷ್ಟಿ ಸಂಭವಿಸಿದರೆ ದೇಶದ ಆದಾಯಕ್ಕೂ ಹೊಡೆತ ಬೀಳಲಿದೆ.