ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆತಂಕ ಎದುರಾಗಿದೆ. ಬೈಂದೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಚಡ್ಡಿ ಗ್ಯಾಂಗ್ ಸದಸ್ಯನೊಬ್ಬನ ಮನೆಯ ಅಂಗಳದಲ್ಲಿ ಓಡಾಟ ನಡೆಸಿರುವ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರಿನಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ, ಮನೆಯ ಪಕ್ಕದಲ್ಲಿ ನಿಂತ ಚಡ್ಡಿಗ್ಯಾಂಗ್ ಸದಸ್ಯ ಕಿಟಕಿ ಮೂಲಕ ಮನೆಯೊಳಗೆ ಇಣುಕಿದ್ದಾನೆ. ಈ ವೇಳೆ ಮನೆಯ ಸದಸ್ಯರು ಎಚ್ಚರವಿದ್ದು ಮಾತನಾಡುತ್ತಿರುವುದು ಕೇಳಿದೆ. ಮನೆಯಲ್ಲಿ ಎಷ್ಟು ಜನರಿದ್ದಾರೆ ಎನ್ನುವುದನ್ನು ಮನೆಯ ಅಕ್ಕಪಕ್ಕ ಓಡಾಡಿ ಚಡ್ಡಿಗ್ಯಾಂಗ್ನ ಸದಸ್ಯ ವೀಕ್ಷಿಸಿದ್ದಾನೆ.
ಹೀಗೆ ಮುಖಕ್ಕೆ ಟೀಶರ್ಟ್ ಕಟ್ಟಿಕೊಂಡು, ಕೈಯಲ್ಲಿ ಚಪ್ಪಲಿ ಹಿಡಿದು, ಕೇವಲ ಚಡ್ಡಿ ಧರಿಸಿದ ಚಡ್ಡಿ ಗ್ಯಾಂಗ್ ಸದಸ್ಯ ಮನೆಯನ್ನು ಗಮನಿಸುತ್ತಾ, ಹೊಂಚು ಹಾಕುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದುದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಅಕ್ಕಪಕ್ಕ ಗಮನಿಸುತ್ತಿದ್ದ ಚಡ್ಡಿ ಗ್ಯಾಂಗ್ ಸದಸ್ಯನ ಕಣ್ಣಿಗೆ ಸಿಸಿಕ್ಯಾಮೆರಾ ಕಾಣಿಸಿದೆ. ಕ್ಯಾಮೆರಾ ನೋಡುತ್ತಲೇ ಗ್ಯಾಂಗ್ ಸದಸ್ಯ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೀಗ ಚಡ್ಡಿ ಗ್ಯಾಂಗ್ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಚಡ್ಡಿ ಗ್ಯಾಂಗ್ ಪತ್ತೆಗಾಗಿ ಬೈಂದೂರು ಪೊಲೀಸರು ಬಲೆ ಬೀಸಿದ್ದಾರೆ.