ದಾವಣಗೆರೆ: ದೀಪಾವಳಿ ಅಮವಾಸ್ಯೆಯಂದು ಟ್ರ್ಯಾಕ್ಟರ್ ತೊಳೆಯಲು ಹೋಗಿ ಚಿಕ್ಕಪ್ಪ-ಮಗ ನೀರು ಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ನಡೆದಿದೆ. ಗುತ್ತೂರು ಗ್ರಾಮದ ಯುವಕ ಪರಶುರಾಮ್(14) ಹಾಗೂ ಅತನ ಚಿಕ್ಕಪ್ಪ ಅಣ್ಣಪ್ಪ(45) ಮೃತ ದುರ್ದೈವಿಗಳಾಗಿದ್ದಾರೆ.
ದೀಪಾವಳಿ ಹಿನ್ನಲೆ ಅಣ್ಣಪ್ಪ ಹಾಗೂ ಅವರ ಅಣ್ಣನ ಮಗ ಪರಶುರಾಮ ಟ್ರ್ಯಾಕ್ಟರ್ ಹಾಗೂ ಬಟ್ಟೆ ತೊಳೆಯಲು ತುಂಗಭದ್ರಾ ನದಿಗೆ ತೆರಳಿದ್ದರು. ನದಿಪಾತ್ರದಲ್ಲಿ ಮರಳುಗಾರಿಕೆಯಿಂದಾಗಿ ಅಲ್ಲಲ್ಲಿ ಹೊಂಡಗಳಾಗಿದ್ದು, ಇಬ್ಬರೂ ನದಿಗೆ ಇಳಿದ ವೇಳೆ ಹೊಂಡ ಇರುವುದು ಗೊತ್ತಾಗದೇ ನದಿಯಲ್ಲಿ ಮುಳುಗಿದ್ದಾರೆ. ಈ ವೇಳೆ ಸ್ಥಳೀಯರು ಮುಳುಗುತ್ತಿದ್ದವರನ್ಜು ರಕ್ಷಣೆ ಮಾಡಲು ಮುಂದಾದರಾದರೂ ದುರದೃಷ್ಟವಶಾತ್ ಸಾಧ್ಯವಾಗಿಲ್ಲ.
ಕೊನೆಗೆ ದೋಣಿ ಮೂಲಕ ಹುಡುಕಾಟ ನಡೆಸಿ ಮೃತ ದೇಹಗಳನ್ನು ಹೊರತೆಗೆದಿದ್ದು, ತುಂಗಾಭದ್ರ ನದಿಪಾತ್ರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ರಮ ಮರಳುಗಾರಿಕೆಯಿಂದಲೇ ಇಂತಹ ಅನಾಹುತಗಳಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.