ತುಮಕೂರು: ತುಮಕೂರಿನ ಸದಾಶಿವನಗರದಲ್ಲಿ ನಶೆ ಏರುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಬ್ದುಲ್ ಖಾದರ್(35) ಹಾಗೂ ಬೀರೇಶ್ (32) ಬಂಧಿತ ಆರೋಪಿಗಳಾಗಿದ್ದಾರೆ.
ನಶೆ ಏರಿಸುವ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 56 ಸಾವಿರ ಬೆಲೆಬಾಳುವ 1700 ನಶೆ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾಗೂ ಇವರಿಗೆ ಮಾತ್ರೆಗಳನ್ನು ಪೂರೈಸುತ್ತಿದ್ದ ನಗರದ ಮೇಳೆಕೋಟೆ ಮುಖ್ಯರಸ್ತೆಯಲ್ಲಿರುವ ಎ.ಎನ್ ಮೆಡಿಕಲ್ಸ್ ನಡೆಸುತ್ತಿದ್ದ ಮಾಲೀಕ ಅಬ್ದುಲ್ ಖಾದರ್ ಎಂಬುವವರನ್ನೂ ಸಹ ಬಂಧಿಸಲಾಗಿದೆ.
ತ್ವರಿತವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ಸಹಚರನ ಜೊತೆ ಸೇರಿ ತುಮಕೂರು ನಗರದ ವಿವಿಧೆಡೆ ನಶೆ ಏರಿಸುವ ಮಾತ್ರೆಗಳನ್ನು ಅಬ್ದುಲ್ ಖಾದರ್ ಮಾರಾಟ ಮಾಡುತ್ತಿದ್ದ. ಕಾಲೇಜು ವಿದ್ಯಾರ್ಥಿಗಳು, ಹಾಗೂ ಯುವ ಸಮುದಾಯವನ್ನೇ ಈ ಆಸಾಮಿಗಳು ಟಾರ್ಗೆಟ್ ಮಾಡುತ್ತಿದ್ದರು.
ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ನಶೆ ಏರುವ ಮಾತ್ರೆಗಳನ್ನ ಮಾರಾಟ ಮಾಡುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಆ್ಯಕ್ಟ್ ಅಡಿ ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.