ಉಡುಪಿ: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಟಿಟಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಅದೃಷ್ಟವಶಾತ್ ಟಿಟಿಯಲ್ಲಿದ್ದ ಎಲ್ಲಾ 11 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರವಾಸಿಗರಿದ್ದ ಟಿಟಿ ವಾಹನ ಉಡುಪಿ ಮಾರ್ಗವಾಗಿ ಕುದುರೆಮುಖದತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ಕಾರ್ಕಳ ಸಮೀಪ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವಾಹನದಲ್ಲಿದ್ದವರು ಕೆಳಗೆ ಇಳಿದು ಜೀವ ಉಳಿಸಿಕೊಂಡಿದ್ದು, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಅಗ್ನಿಶಾಮಕ ದಳಕ್ಕೂ ಸಹ ಕರೆ ಮಾಡಿ ಮಾಹಿತಿ ನೀಡಿದ್ದು, ಈ ವೇಳೆಗಾಗಲೇ ಬೆಂಕಿ ಸಂಪೂರ್ಣ ಟಿಟಿ ಆವರಿಸಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದು ಈ ವೇಳೆಗೆ ಟಿಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಸಮೇತ ಟಿಟಿಯಲ್ಲಿದ್ದವರು ಕೆಳಗಿಳಿದಿ ಪರಿಣಾಮ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ನಂದಿಸಿದ ಬಳಿಕ ಪ್ರವಾಸಿಗರನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.