ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 91,339 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಡಿ.22ರಂದು ನಡೆದ ಮೊದಲ ಹಂತದಲ್ಲಿ 43,238 ಹಾಗೂ ಡಿ.27ರಂದು ನಡೆದ ಎರಡನೇ ಹಂತದಲ್ಲಿ 39,378 ಸ್ಥಾನಗಳಿಗೆ ಮತದಾನ ನಡೆದಿತ್ತು.
ಈ ಭಾರಿ ರಾಜಕೀಯ ಪಕ್ಷಗಳ ಬೆಂಬಲ ಪಡೆದಿದ್ದ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸಿದ್ದು, ಇನ್ನೂ ರಾಜ್ಯದ ಹಲವು ಗ್ರಾಮ ಪಂಚಾಯತಿಗಳಲ್ಲಿ ಸದಸ್ಯ ಸ್ಥಾನಗಳನ್ನು ಲಕ್ಷಾಂತರ ರುಪಾಯಿಗೆ ಹರಾಜು ಹಾಕುವ ಮೂಲಕ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ಆಯೋಗದ ಹೆಚ್ಚರಿಕೆಯ ನಡುವೆಯೂ ಗ್ರಾಮದ ಅಭಿವೃದ್ಧಿ ಹಾಗು ದೇವಸ್ಥಾನದ ಅಭಿವೃದ್ಧಿಗೆ ಯಾರು ಹೆಚ್ಚು ಹಣ ಕೊಡುತ್ತಾರೋ ಅಂತವರನ್ನು ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಳಿದ ಸ್ಥಾನಗಳಿಗೆ ನಡೆಸಿದ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಎರಡು ಹಂತಗಳ ಮತದಾನ ಪ್ರಕ್ರಿಯೆಯಲ್ಲಿ ಕರೋನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.