ಬೆಂಗಳೂರು: ಕಸ್ಟಮ್ಸ್ ಮತ್ತು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಅಧಿಕಾರಿಗಳಂತೆ ನಟಿಸಿ ಸಾಫ್ಟ್ವೇರ್ ಇಂಜಿನಿಯರ್ನಿಂದ 11 ಕೋಟಿ ರೂಪಾಯಿ ಸುಲಿಗೆ ಮಾಡಿದ ಮೂವರನ್ನು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕರಣ್, ತರುಣ್ ನಥಾನಿ ಮತ್ತು ಧವಲ್ ಷಾ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತನ ಬಳಿ ಇತ್ತೀಚೆಗೆ 12 ಕೋಟಿ ರೂಪಾಯಿ ಬಂದಿದ್ದನ್ನು ತಿಳಿದು, ಮೂವರು ಆರೋಪಿಗಳು ತಮ್ಮನ್ನು ಇಡಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ವಿವಿಧ ಸಂಖ್ಯೆಗಳಿಂದ ಆತನನ್ನು ಸಂಪರ್ಕಿಸಲು ಪ್ರಾರಂಭಿಸಿದರು.
ಆತಯ ಖಾತೆಯಲ್ಲಿ ಅಕ್ರಮ ಹಣಕಾಸು ವಹಿವಾಟುಗಳು ನಡೆದಿವೆ ಎಂದು ಆರೋಪಿಸಿದ ಅವರು, ತನಿಖೆ ನಡೆಸುವ ನೆಪದಲ್ಲಿ ಆತನ ಕೆವೈಸಿ ದಾಖಲೆಗಳನ್ನು ಕೋರಿದರು. ಮೂವರೂ ಸಂತ್ರಸ್ತನಿಗೆ ಮನಿ ಲಾಂಡರಿಂಗ್ ಆರೋಪದ ಬೆದರಿಕೆ ಹಾಕಿದ್ದು, ಕಾನೂನು ಕ್ರಮವನ್ನು ತಪ್ಪಿಸಲು ಹಣವನ್ನು ವರ್ಗಾಯಿಸುವಂತೆ ಒತ್ತಡ ಹೇರಿದ್ದರು.
ಆರೋಪಿಗಳ ಬೆದರಿಕೆಯನ್ನು ನಂಬಿದ ಸಾಫ್ಟ್ವೇರ್ ಇಂಜಿನಿಯರ್ ಒಂದು ತಿಂಗಳಲ್ಲಿ ಒಂಬತ್ತು ವಿಭಿನ್ನ ಖಾತೆಗಳಿಗೆ ಹಣವನ್ನು ವರ್ಗಾಯಿಸಿದರು. ತಾನು ಹಗರಣಕ್ಕೆ ಬಲಿಯಾಗಿದ್ದೇನೆಂದು ಅರಿತ ಆತ, ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದನು.
ಇದಲ್ಲದೆ, ಬ್ಯಾಂಕ್ ವಹಿವಾಟುಗಳನ್ನು ವಿಶ್ಲೇಷಿಸಿದಾಗ, ಸೂರತ್ನ ಚಿನ್ನದ ಆಭರಣ ಅಂಗಡಿ ಮಾಲೀಕರ ಖಾತೆಗೆ 7.5 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸರು ಕಂಡುಹಿಡಿದರು. ಸೂರತ್ನಲ್ಲಿ ತಮ್ಮ ತನಿಖೆಯ ಸಮಯದಲ್ಲಿ, ಆರೋಪಿಗಳು ಸುಲಿಗೆ ಮಾಡಿದ ಹಣವನ್ನು ಚಿನ್ನ ಖರೀದಿಸಲು ಬಳಸಿದ್ದಾರೆ ಎಂದು ಅವರು ಪತ್ತೆಹಚ್ಚಿದರು. ತರುವಾಯ, ಪೊಲೀಸರು ಹಣವನ್ನು ವರ್ಗಾಯಿಸಿದ ಇತರ ಖಾತೆಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.