ಬೆಂಗಳೂರು: ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 (ಕರ್ನಾಟಕ ಅಧಿನಿಯಮ 12)ರ 6ನೇ ಪ್ರಕರಣದ ಮೇರೆಗೆ ಅಗತ್ಯ ಪಡಿಸಲಾದಂತೆ ಬಳ್ಳಾರಿಯ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ, ನೂತನ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ.
ಹೊಸ ಜಿಲ್ಲೆಗೆ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ಸೇರ್ಪಡೆಗೊಳಿಸಲಾಗಿದೆ. ಉಳಿದಂತೆ ಬಳ್ಳಾರಿ ಸೇರಿದಂತೆ ಸಂಡೂರು, ಕಂಪ್ಲಿ, ಸಿರುಗುಪ್ಪ, ಕುರುಗೋಡು ತಾಲೂಕುಗಳನ್ನು ಮೂಲ ಬಳ್ಳಾರಿ ಜಿಲ್ಲೆಯಲ್ಲೇ ಉಳಿಸಲಾಗಿದೆ.
ಇನ್ನು ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಅಧಿಸೂಚನೆಯು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಒಂದು ತಿಂಗಳೊಳಗಾಗಿ ಆಹ್ವಾನಿಸಲಾಗಿತ್ತು. ಮತ್ತು ಸದರಿ ರಾಜ್ಯ ಪತ್ರವನ್ನು ದಿನಾಂಕ 12 ಡಿಸೆಂಬರ್ 2020 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಮತ್ತು ರಾಜ್ಯ ಸರ್ಕಾರವು ಈ ಬಗ್ಗೆ ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಗಣಿಸಿ ಈ ಆದೇಶವನ್ನು ಹೊರಡಿಸಿದೆ.