ದಾವಣಗೆರೆ ಮಾ.19 : ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ. ಹಾಗೂ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್‍ನಾಯ್ಕ ತಿಳಿಸಿದ್ದಾರೆ.
ಮಾ.15 ಮತ್ತು 16 ರಂದು ಕೆಲವು ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಕೊಂಡಜ್ಜಿ ಗ್ರಾಮದಲ್ಲಿನ ಕೋಳಿ ಫಾರಂಗಳಲ್ಲಿ ಹಕ್ಕಿ ಜ್ವರದಿಂದಾಗಿ ಕೋಳಿಗಳು ಸಾವನ್ನಪ್ಪುತ್ತಿರುವುದಾಗಿ ವರದಿ ಪ್ರಸಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಾ.15 ಮತ್ತು 16 ರಂದು ತಜ್ಞರು ಗ್ರಾ.ಪಂ, ಪಿಡಿಓ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಕೊಂಡಜ್ಜಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕೋಳಿ ಫಾರಂಗಳ ತಪಾಸಣೆ ಮಾಡಲಾಯಿತು.
ಅರಣ್ಯದಲ್ಲಿ ಕೆಲವು ಸತ್ತ ಕೋಳಿಗಳನ್ನು ಚೀಲದಲ್ಲಿ ತುಂಬಿ ಎಸೆಯಲಾಗಿರುವುದನ್ನು ಕೂಡಾ ಪರಿಶೀಲಿಸಲಾಯಿತು. ಈ ಬಗ್ಗೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಗ್ರಾಮಸ್ಥರೊಡನೆ ಸಂವಾದಿಸಲಾಗಿ, ಸತ್ತ ಕೋಳಿಗಳು ಅಂದಾಜು ಎರಡು ಕೆ.ಜಿ ಗೂ ಮೇಲ್ಪಟ್ಟು ತೂಕವುಳ್ಳವಾಗಿದ್ದು, ಆ ವಯೋಮಾನದ ಮತ್ತು ತೂಕದ ಕೋಳಿಗಳು ಕೊಂಡಜ್ಜಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸದ್ಯಕ್ಕೆ ಇರುವುದು ಕಂಡುಬಂದಿರುವುದಿಲ್ಲ. ಈ ಸತ್ತ ಕೋಳಿಗಳನ್ನು ಗ್ರಾ.ಪಂ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರೊಂದಿಗೆ ವೈಜ್ಞಾನಿಕವಾಗಿ ವಿಲೇ ಮಾಡಲಾಯಿತು.
ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಕೋಳಿಮೊಟ್ಟೆ ಫಾರಂ ಸೇರಿದಂತೆ ಒಟ್ಟು 07 ಕೋಳಿ ಫಾರಂಗಳಿರುತ್ತದೆ. ಈ ಪೈಕಿ ಗಿರಿಜಾರಮಣ ಮೊಟ್ಟೆ ಕೋಳಿ ಫಾರಂನಲ್ಲಿ ಎಂಟು ವಾರದ 65000 ಕೋಳಿಗಳು ಇರುತ್ತವೆ. ತಾ.ಪಂ ಸದಸ್ಯರಾದ ಪರಮೇಶ್ವರಪ್ಪ ಇವರ ಫಾರಂನಲ್ಲಿ ಮೂರು ವಾರಗಳ 6000 ಕೋಳಿ ಮರಿಗಳು ಇರುತ್ತವೆ. ಜಿ.ಪರಮೇಶ್ವರಪ್ಪ ಇವರ ಫಾರಂನಲ್ಲಿ ನಾಲ್ಕು ವಾರಗಳ 2000 ಕೋಳಿಮರಿಗಳು ಇದ್ದು, ಮಾರಾಟ ಮಾಡಲಾಗಿದೆ. ಹರೀಶ್‍ಗೌಡ ಇವರ ಫಾರಂನಲ್ಲಿ 1650 ಒಂದು ವಾರದ ಮರಿಗಳು ಇರುತ್ತವೆ.
ಈ ಮೇಲಿನ ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ. ಹಾಗೂ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡುಬಂದಿರುವುದಿಲ್ಲ. ಅವಶ್ಯಕ ಸೀರಂ, ಟ್ರೇಕಿಯಲ್/ಕ್ಲೊಯಕಲ್ ಸ್ವಾಬ್ ಮತ್ತು ಪರಿಸರ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ.
ಫಾರಂ ಮಾಲೀಕರುಗಳು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೋಳಿಗಳಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನು ಓದಿ: ರಾಜ್ಯಕ್ಕೆ ಮತ್ತೆ ಹಕ್ಕಿ ಜ್ವರದ ಭೀತಿ: 8 ದಿನಗಳಲ್ಲಿ 8 ಸಾವಿರ ಕೋಳಿಗಳ ನಿಗೂಢ ಸಾವು!