NREGA scheme | ಗ್ರಾಮೀಣ ಪ್ರದೇಶಗಳ ರೈತರಿಗೆ ಜಾನುವಾರು ಸಾಕಾಣಿಕೆ (Livestock farming) ಪ್ರಮುಖ ಜೀವನಾಧಾರವಾಗಿದೆ. ಈ ಹಿನ್ನೆಲೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿ ನರೇಗಾ) ರೈತರ ಆದಾಯವನ್ನು ಹೆಚ್ಚಿಸಲು ಹಾಗೂ ಪಶುಸಂಗೋಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೊಸ ಕ್ರಮ ಕೈಗೊಂಡಿದೆ. ಈ ಯೋಜನೆಯಡಿ ಹಸು ಅಥವಾ ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ರೂ. ಸಹಾಯಧನ ದೊರೆಯಲಿದೆ. ಇದರಿಂದ ರೈತರು ಸುರಕ್ಷಿತ ಮತ್ತು ಸ್ವಚ್ಛ ಪರಿಸರದಲ್ಲಿ ಜಾನುವಾರುಗಳನ್ನು ಸಾಕುವ ಅವಕಾಶ ಪಡೆಯುತ್ತಾರೆ.
ಯೋಜನೆಯ ಉದ್ದೇಶ & ವ್ಯಾಪ್ತಿ
ಎಂಜಿ ನರೇಗಾ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನಗಳ ವೇತನದ ಉದ್ಯೋಗ ಖಾತರಿ ನೀಡುವುದು. ಈ ಯೋಜನೆಯಡಿ 266ಕ್ಕೂ ಹೆಚ್ಚು ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಶೌಚಾಲಯ, ಅರಣೀಕರಣ, ಪೌಷ್ಟಿಕ ಕೈತೋಟ, ಕೆರೆ ಅಭಿವೃದ್ಧಿ, ಗೋದಾಮು ನಿರ್ಮಾಣ ಸೇರಿದಂತೆ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯಧನವೂ ಲಭ್ಯ. ಇದರ ಭಾಗವಾಗಿ ಪಶು ಶೆಡ್ ನಿರ್ಮಾಣ ಸಹ ಯೋಜನೆಯೊಳಗೆ ಸೇರಿಸಲಾಗಿದೆ.
ಸಹಾಯಧನದ ವಿವರಗಳು
ಹಸು & ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲ ವರ್ಗದ ರೈತರಿಗೆ ₹57,000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಇದರಲ್ಲು ₹10,556 ರೂ. ಕೂಲಿಯಾಗಿ ಮತ್ತು ₹46,644 ರೂ. ಸಾಮಗ್ರಿ ಸಹಾಯಧನವಾಗಿ ಸಿಗುತ್ತದೆ. ಇದಲ್ಲದೆ ಕುರಿ, ಹಂದಿ, ಕೋಳಿ ಶೆಡ್‌ಗಳ ನಿರ್ಮಾಣಕ್ಕೂ ಸಹಾಯಧನ ದೊರೆಯುತ್ತದೆ. ಒಂದು ಕುಟು೦ಬವು ಜೀವಿತಾವಧಿಯಲ್ಲಿ ನರೇಗಾ ವೈಯಕ್ತಿಕ ಕಾಮಗಾರಿಗಳ ಅಡಿಯಲ್ಲಿ ಗರಿಷ್ಠ ₹5 ಲಕ್ಷದವರೆಗೆ ಸಹಾಯ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
ಯೋಜನೆಯ ಲಾಭ ಪಡೆಯಲು ಮೊದಲು ನರೇಗಾ ಜಾಬ್ ಕಾರ್ಡ್ ಇರಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಡೆಯಬಹುದು. ಜಾನುವಾರುಗಳ ಶೆಡ್ ಅಗತ್ಯವಿರುವುದನ್ನು ದೃಢೀಕರಿಸಲು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಪ್ರಮಾಣಪತ್ರ ಪಡೆಯಬೇಕು. ನಂತರ ಆ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಪರಿಶೀಲನೆಯ ಬಳಿಕ ಸ್ಥಳ ಪರಿಶೀಲನೆ ನಡೆಸಿ ಶೆಡ್ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ.
ಕುರಿ-ಮೇಕೆ ಸಾಕಾಣಿಕೆಗೆ ಹೆಚ್ಚುವರಿ ಯೋಜನೆಗಳು
ಕನ್ನಡನಾಡಿನ ರೈತರಿಗೆ ಹೈನುಗಾರಿಕೆಯ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮತ್ತು ವಿಶೇಷ ಘಟಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ 6+1 ಕುರಿ ಘಟಕ ಮತ್ತು ₹45,000 ರೂ. ವೆಚ್ಚದ ಘಟಕದ ಮೇಲೆ ಶೇ.90 ಸಹಾಯಧನ ಸಿಗುತ್ತದೆ. ಈ ಯೋಜನೆಗಳು ಗ್ರಾಮೀಣ ಕುಟುಂಬಗಳ ಆರ್ಥಿಕ ಬಲವರ್ಧನೆಗೆ ಹೊಸ ಬೆಳಕಾಗಿ ಪರಿಣಮಿಸುತ್ತಿವೆ.




