ಹೊಸಪೇಟೆ: ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಅವರು “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂಬ ದೈವವಾಣಿ ನುಡಿದರು. ಡೆಂಕನಮರಡಿಯಲ್ಲಿ ನಡೆದ ಈ ಜಾತ್ರೋತ್ಸವದಲ್ಲಿ ಢಮರುಗದ ನಾದ, ದೀವಟಿಗೆಗಳ ಬೆಳಕು, ಗೊರವಪ್ಪಗಳ ಮೆರವಣಿಗೆ ಮತ್ತು ಲಕ್ಷಾಂತರ ಭಕ್ತರ ಭಕ್ತಿಯಿಂದ ಜಾತ್ರೆ ಜನಜಂಗುಳಿಯಿಂದ ಕಂಗೊಳಿಸಿತು. ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದ ನೂರಾರು ಗೊರವಪ್ಪರು ಮತ್ತು ಭಕ್ತರು ಉತ್ಸವದ ಭಾಗಿಯಾದರು.
ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನಮರಡಿಗೆ ಆಗಮಿಸಿದರು. 11 ದಿನಗಳ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ರಾಮಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆಯ ಮೂಲಕ ಕರೆತರಲಾಯಿತು. ಸಂಜೆ 5.27 ಕ್ಕೆ ಬಿಲ್ಲನ್ನೇರಿದ ಗೊರವಪ್ಪನ ಸದ್ದಿನೊಂದಿಗೆ ನೆರೆದ ಜನ ನಿಶ್ಬದ್ಧರಾದರು. ಕೆಲವೇ ಸೆಕೆಂಡುಗಳಲ್ಲಿ ಕಾರಣಿಕ ನುಡಿದು ಬೀಳುತ್ತಿದ್ದ ರಾಮಪ್ಪನನ್ನು ಗೊರವ ಸಮೂಹ ಎತ್ತಿ ಹಿಡಿದರು.
ಕಾರ್ಣಿಕೋತ್ಸವದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಉತ್ಸವ ಮುಕ್ತಾಯದ ನಂತರ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿ, ವಾಹನ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟಾಯಿತು. ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಪ್ರಸ್ತುತ ವರ್ಷದಲ್ಲಿ ಸಮೃದ್ಧಿ ಮಳೆಯಿಂದಾಗಿ ರೈತರಿಗೆ ಹರ್ಷ ತರಲಿದೆ ಮತ್ತು ರಾಜ್ಯ ಹಾಗೂ ರಾಷ್ಟ್ರ ಸುಭಿಕ್ಷೆಯಿಂದಿರಲಿದೆ ಎಂದು ವಿಶ್ಲೇಷಿಸಿದರು.
ಕಾರ್ಣಿಕೋತ್ಸವದಲ್ಲಿ ಕಾಗಿನೆಲೆ ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಬಳ್ಳಾರಿ ಸಂಸದ ಈ.ತುಕರಾಂ, ಶಾಸಕ ಕೃಷ್ಣನಾಯ್ಕ್, ಐಜಿಪಿ ಲೋಕೇಶ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮತ್ತು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.