ಶಿರಸಿ: ತಾಲ್ಲೂಕಿನ ಉಂಚಳ್ಳಿಯಲ್ಲಿ ಜಿಂಕೆ ಬೇಟೆಯಾಡಿದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಉಂಚಳ್ಳಿಯ ಗಣಪತಿ ಮಂಜುನಾಥ ಗೌಡ ಬಂಧಿತ ಆರೋಪಿಯಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಉಂಚಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗ್ರಾಮದ ಮೂವರು ಸೇರಿ ಜಿಂಕೆ ಬೇಟೆಯಾಡಿದ್ದರು. ಬಳಿಕ ಅಲ್ಲಿನ ಹೊಳೆ ಸಮೀಪ ಜಿಂಕೆ ಮಾಂಸ ಸಿದ್ಧಪಡಿಸುತ್ತಿದ್ದ ವೇಳೆ ಶಿರಸಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಅಜ್ಜಯ್ಯ.ಜಿ.ಆರ್. ಹಾಗೂ ಉಪಅರಣ್ಯ ಸಹಾಯಕ ಸಂರಕ್ಷಣಾಧಿಕಾರಿಗಳಾದ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಿರೀಶ ಎಲ್ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿದ್ದರು.
ಈ ವೇಳೆ ಗಣಪತಿ ಗೌಡ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಆರೋಪಿಗಳಾದ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ ನಾಯ್ಕ ತಲೆಮರೆಸಿಕೊಂಡಿದ್ದಾರೆ. ಆರೋಪಿ ಸಹಿತ ಜಿಂಕೆ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಶೋಧ ಮುಂದುವರೆಸಿದ್ದಾರೆ.