ಶಿವಮೊಗ್ಗ: ಶಿವಮೊಗ್ಗದ ವಿನೋಬನಗರ ರೈಲ್ವೇ ಟ್ರ್ಯಾಕ್ ಬಳಿ ಗೃಹಿಣಿಯೋರ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬನಗರ ನಿವಾಸಿ ಕಮಲಾ(35) ಮೃತ ದುರ್ದೈವಿ ಮಹಿಳೆಯಾಗಿದ್ದಾರೆ.
ಕಮಲಾ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಪತಿ ಹಾಗೂ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದ್ದು, ಸೋಮವಾರ ರಾತ್ರಿ ಸಹ ಗಂಡ ಹೆಂಡತಿ ನಡುವೆ ಜಗಳ ತಾರಕಕ್ಕೇರಿದೆ. ಪರಿಣಾಮ ಬೇಸತ್ತ ಕಮಲಾ ರಾತ್ರಿ ರೈಲು ಹಳಿ ಮೇಲೆ ತೆರಳಿ ತಾಳಗುಪ್ಪಾ-ಬೆಂಗಳೂರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ವಿನೋನಗರ ಠಾಣೆ ಹಾಗೂ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.