ನವದೆಹಲಿ: ಜೈ ಶ್ರೀರಾಮ್ ಘೋಷಣೆ ಕೂಗುವುದು ಹೇಗೆ ಕ್ರಿಮಿನಲ್ ಅಪರಾಧ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಕೂಗಿದ ಇಬ್ಬರು ವ್ಯಕ್ತಿಗಳ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಅವರು ಒಂದು ನಿರ್ದಿಷ್ಟ ಧಾರ್ಮಿಕ ನುಡಿಗಟ್ಟು ಅಥವಾ ಹೆಸರನ್ನು ಕೂಗುತ್ತಿದ್ದರು. ಅದು ಹೇಗೆ ಅಪರಾಧ? “. ದೂರುದಾರ ಹೈದರ್ ಅಲಿ C.M ಸಲ್ಲಿಸಿದ ಅರ್ಜಿಯ ಕುರಿತು ಪ್ರಶ್ನಿಸಿದ ನ್ಯಾಯಾಲಯ, ಮಸೀದಿಯೊಳಗೆ ಬಂದು ಘೋಷಣೆ ಕೂಗಿದ ವ್ಯಕ್ತಿಗಳನ್ನು ಹೇಗೆ ಗುರುತಿಸಲಾಯಿತು ಎಂದು ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರನ್ನು ನ್ಯಾಯಪೀಠ ಪ್ರಶ್ನಿಸಿದೆ.
ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದ ಸೆಪ್ಟೆಂಬರ್ 13ರ ಹೈಕೋರ್ಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ತನಿಖೆ ಅಪೂರ್ಣವಾಗಿದ್ದರೂ ಹೈಕೋರ್ಟ್ ವಿಚಾರಣೆಯನ್ನು ರದ್ದುಗೊಳಿಸಿದೆ ಎಂದು ವಕೀಲ ಕಾಮತ್ ಹೇಳಿದರು.
ಆರೋಪಗಳು ಐಪಿಸಿ ಸೆಕ್ಷನ್ 503 ಅಥವಾ ಸೆಕ್ಷನ್ 447 ರ ಅಂಶಗಳಿಗೆ ಒಳಪಟ್ಟಿಲ್ಲ ಎಂದು ಹೈಕೋರ್ಟ್ ಗಮನಿಸಿದೆ ಎಂದು ನ್ಯಾಯಪೀಠ ಹೇಳಿದೆ. ಐಪಿಸಿಯ ಸೆಕ್ಷನ್ 503 ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ್ದರೆ, ಸೆಕ್ಷನ್ 447 ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದ್ದಾಗಿದೆ.
ಪೀಠವು, “ಮಸೀದಿಗೆ ಪ್ರವೇಶಿಸಿದ ನಿಜವಾದ ವ್ಯಕ್ತಿಗಳನ್ನು ಗುರುತಿಸಲು ನಿಮಗೆ ಸಾಧ್ಯವಾಯಿತೆ?” ಎಂದು ಕೇಳಿದಾಗ, ಈ ಬಗ್ಗೆ ರಾಜ್ಯ ಪೊಲೀಸರು ವಿವರಣೆ ನೀಡಬೇಕು ಎಂದು ಕಾಮತ್ ಹೇಳಿದರು. ಅರ್ಜಿಯ ಪ್ರತಿಯನ್ನು ರಾಜ್ಯಕ್ಕೆ ನೀಡುವಂತೆ ನ್ಯಾಯಪೀಠವು ಅರ್ಜಿದಾರರಿಗೆ ಸೂಚಿಸಿತು ಮತ್ತು ಈ ವಿಷಯವನ್ನು 2025ರ ಜನವರಿಯಲ್ಲಿ ಪ್ರಕಟಿಸುವುದಾಗಿ ಹೇಳಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ, “ಯಾರಾದರೂ ಜೈ ಶ್ರೀರಾಮ್ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ” ಎಂದು ಹೇಳಿತ್ತು. ಈ ಘಟನೆಯು ಸಾರ್ವಜನಿಕ ಕಿಡಿಗೇಡಿತನ ಅಥವಾ ಯಾವುದೇ ಬಿರುಕನ್ನು ಉಂಟುಮಾಡಿದೆ ಎಂದು ಆರೋಪಿಸಲಾಗಿಲ್ಲ ಎಂದು ಗಮನಿಸಿದ ಹೈಕೋರ್ಟ್, ಐಪಿಸಿ ಸೆಕ್ಷನ್ 506ರ ಅಂಶಗಳನ್ನು ಪರಿಗಣಿಸುವ, ಕ್ರಿಮಿನಲ್ ಬೆದರಿಕೆಯ ಅಪರಾಧವನ್ನು ಮಾಡಿದ ಆರೋಪವನ್ನು ಸಹ ದೂರುದಾರರು ನೋಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇಬ್ಬರು ವ್ಯಕ್ತಿಗಳು ಮಸೀದಿಗೆ ಪ್ರವೇಶಿಸಿ ಧಾರ್ಮಿಕ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಿರುವ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಫ್ಐಆರ್ ಮತ್ತು ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಆದೇಶವನ್ನು ಹೊರಡಿಸಲಾಗಿದೆ. ಈ ಘಟನೆಯು ಸೆಪ್ಟೆಂಬರ್ 24, 2023 ರಂದು ನಡೆದಿದ್ದು, ಪುತ್ತೂರು ವೃತ್ತದ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.