ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಧಾರವಾಡ, ಚಿತ್ರದುರ್ಗ, ಹಾಸನ, ಮಡಿಕೇರಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿಯ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ.
ಇನ್ನು, ಆಗುಂಬೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಇಂದು ಸಂಜೆ ಅಥವಾ ರಾತ್ರಿಯ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದ ಉಳಿದೆಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ
ನಿನ್ನೆ ರಾಜ್ಯದ ಹಲವೆಡೆ ಆಲಿಕಲ್ಲು ಮಳೆ:
ರಾಜ್ಯದ ಹಲವೆಡೆ ಗುರುವಾರ ಮಳೆಯಾಗಿದ್ದು, ಶಿರಸಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಸಿದ್ದಾಪುರ ಪಟ್ಟಣ & ಕೆಲವು ಹಳ್ಳಿಗಳಲ್ಲಿಯೂ ಮಳೆಯಾಗಿದೆ.
ಇನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೆ.ಆರ್.ನಗರ, ಹೆಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಹಲವೆಡೆ ತುಂತುರು ಮಳೆಯಾಗಿದ್ದು, ಕೊಡಗಿನ ಅಮ್ಮತ್ತಿ, ಪೊನ್ನಂಪೇಟೆ, ಶ್ರೀಮಂಗಲ, ವಿರಾಜಪೇಟೆ, ಶಿವಮೊಗ್ಗ ಜಿಲ್ಲೆಯ ಸಾಗರ, ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಮಳೆಯಾಗಿದೆ.