ಹಾಸನ: ಗೋವಾಗೆ ತೆರಳಿದ್ದ ವೇಳೆ ಯುವತಿ ತಾನು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಯುವಕನ ವಿರುದ್ಧ ವಂಚನೆ ಆರೋಪ ಮಾಡಿರುವ ಯುವತಿ ಪೋಷಕರು, ತಮಗೆ ನ್ಯಾಯ ಕೊಡಿಸುವಂತೆ ಹಾಸನ ಜಿಲ್ಲೆಯ ಬೇಲೂರಿನ ಪೊಲೀಸರ ಮೊರೆ ಹೋಗಿದ್ದಾರೆ.
ಅದ್ದೂರಿಯಾಗಿ ನಿಷ್ಚಿತಾರ್ಥ ಮಾಡಿಕೊಂಡು ಈಗ ಮದುವೆಯಾಗುವುದಿಲ್ಲವೆಂದು ಆ ಯುವಕ ಮೋಸ ಮಾಡುತ್ತಿದ್ದಾನೆ ಎಂದು ಯುವತಿಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಜನ್ನಾಪುರ ನಿವಾಸಿ ಚಿನ್ನಿಗದ ನಿಶ್ಚಿತ್ ಎಂದು ಹೇಳಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಈ ಟ್ರಾಫಿಟ್ ಕಂಪನಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ ಖಾಸಗಿ ಕಂಪನಿಯ ಮಾಲೀಕ ನಿಶ್ಚಿತ್ ಎಂಬ ಯುವಕನೊಂದಿಗೆ ಇಂಜಿನಿಯರಿಂಗ್ ಮಾಡಿದ್ದ ಯುವತಿಯನ್ನು ಅವರ ಪೋಷಕರು ಪ್ರೇಮಿಗಳ ದಿನ ಫೆಬ್ರುವರಿ ೧೪ ರಂದು ಅದ್ದೂರಿಯಾಗಿ ನಿಷ್ಚಿತಾರ್ಥ ನೆರೆವೇರಿಸಿಕೊಟ್ಟಿದ್ದರು.
ನಿಷ್ಚಿತಾರ್ಥ ಬಳಿಕ ಇಬ್ಬರು ಗೋವಾಗೆ ಟ್ರಿಪ್ ಗೆ ಹೋಗಿದ್ದರು. ಈ ವೇಳೆ ಯುವತಿ ತಾನು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿರುವುದಾಗಿ ಯುವತಿಯ ಪೋಷಕರಿಗೆ ಆ ಯುವಕ ತಿಳಿಸಿದ್ದಾನೆ. ಅಲ್ಲದೆ ಯುವಕನ ಪೋಷಕರು ಸಹ ಏಕಾಏಕಿ ಮದುವೆ ಬೇಡವೆಂದು ಹೇಳಿದ್ದು, ಯುವತಿಯ ಪೋಷಕರಲ್ಲಿ ಆತಂಕ ಶುರುವಾಗಿದೆ.
ಇನ್ನು ಕೆಲಸ ಬಿಟ್ಟು ಮದುವೆಗೆ ರೆಡಿಯಾಗಿದ್ದ ಯುವತಿ ಈ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದು, ಮನನೊಂದು ವಿಷ ಸೇವಿಸಿದ್ದಾಳೆ. ಸದ್ಯ ಆ ಯುವತಿಯನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಧಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ತಮಗೆ ನ್ಯಾಯ ಕೊಡಿಸುವಂತೆ ಯುವತಿಯ ಪೋಷಕರು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.