ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ವಡೋದರಾದಲ್ಲಿ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ C-295 ವಿಮಾನಗಳನ್ನು ತಯಾರಿಸಲು ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು.
C-295 ಕಾರ್ಯಕ್ರಮದಡಿಯಲ್ಲಿ ಒಟ್ಟು 56 ವಿಮಾನಗಳನ್ನು ತಯಾರಿಸಲಾಗುತ್ತಿದೆ. ಈ ಪೈಕಿ ವಿಮಾನ ತಯಾರಿಕಾ ಕಂಪೆನಿ ಏರ್‌ಬಸ್‌ನಿಂದ 16 ವಿಮಾನಗಳನ್ನು ಸ್ಪೇನ್ ನೇರವಾಗಿ ತಲುಪಿಸಲಿದೆ. ಮತ್ತು ಉಳಿದ 40 ವಿಮಾನಗಳನ್ನು ಈ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾಗುವುದು. ಇದು ಭಾರತದಲ್ಲಿನ ಮಿಲಿಟರಿ ವಿಮಾನಗಳಿಗೆ ಮೊದಲ ಖಾಸಗಿ ವಲಯದ ಅಂತಿಮ ಅಸೆಂಬ್ಲಿ ಲೈನ್(FAL) ಆಗಿದೆ.
ಈ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ನಲ್ಲಿ ವಿಮಾನದ ಅಭಿವೃದ್ಧಿ, ಭಾಗಗಳ ತಯಾರಿಕೆ, ಜೋಡಣೆ, ಪರೀಕ್ಷೆ ಮತ್ತು ಅರ್ಹತೆ ಪ್ರಮಾಣ ಸೇರಿದಂತೆ ವಿಮಾನದ ಸಂಪೂರ್ಣ ನಿರ್ವಹಣೆಯನ್ನು ಒಳಗೊಂಡಿರಲಿದೆ. 2021 ರಲ್ಲಿ ರಕ್ಷಣಾ ಸಚಿವಾಲಯವು 56 ವಿಮಾನಗಳ ಪೂರೈಕೆಗಾಗಿ ಸ್ಪೇನ್‌ನ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಎಸ್‌ಎ ಜೊತೆ 21,935 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಡೋದರಾ ಸೌಲಭ್ಯದಲ್ಲಿ ತಯಾರಾದ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು ಎಂದರು. ಕಳೆದ ಅಕ್ಟೋಬರ್ 2022ರಲ್ಲಿ ವಡೋದರಾದಲ್ಲಿ C-295 ವಿಮಾನದ ಎಫ್‌ಎಎಲ್ ಘಟಕಕ್ಕೆ ಅಡಿಪಾಯ ಹಾಕಿದ್ದ ಪ್ರಧಾನಿ ಮೋದಿ, ಟಾಟಾ-ಏರ್‌ಬಸ್ ಉತ್ಪಾದನಾ ಸೌಲಭ್ಯವು ಭಾರತ-ಸ್ಪೇನ್ ಸಂಬಂಧಗಳನ್ನು ಮತ್ತು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಮಿಷನ್ ಅನ್ನು ಬಲಪಡಿಸುತ್ತದೆ ಎಂದು ಹೇಳಿದ್ದರು.
ಕೆಲ ದಿನಗಳ ಹಿಂದಷ್ಟೇ 86ನೇ ವಯಸ್ಸಿನಲ್ಲಿ ನಿಧನರಾದ, ಯೋಜನೆಯ ಹಿಂದಿನ ಮೆದುಳು ಎಂದು ಕರೆಸಿಕೊಂಡಿದ್ದ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರಿಗೆ ಅವರು ಗೌರವ ಸಲ್ಲಿಸಿದರು. ಇತ್ತೀಚೆಗೆ, ನಾವು ದೇಶದ ಮಹಾನ್ ಪುತ್ರ ರತನ್ ಟಾಟಾ ಜಿ ಅವರನ್ನು ಕಳೆದುಕೊಂಡಿದ್ದೇವೆ. ಅವರು ಇಂದು ನಮ್ಮ ನಡುವೆ ಇದ್ದಿದ್ದರೆ, ಅವರು ಸಂತೋಷವಾಗಿರುತ್ತಿದ್ದರು. ಆದರೆ ಅವರ ಆತ್ಮ ಎಲ್ಲಿದ್ದರೂ ಅವರು ಸಂತೋಷವಾಗಿರುತ್ತಾರೆ ಎಂದು ಅವರು ಹೇಳಿದರು.