ಕೋವಿಡ್-19 ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಜನಸಂಖ್ಯಾ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ನಗದು ಪುರಸ್ಕಾರ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಹೌದು, ರಷ್ಯಾ ದೊಡ್ಡ ದೇಶವಾದರೂ ಅಲ್ಲಿ ಜನಸಂಖ್ಯೆ ಬಹಳ ಕಡಿಮೆ. ಈ ಕಾರಣಕ್ಕಾಗಿಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಸ ಆಫರ್ ಘೋಷಿಸಿದ್ದು, 10 ಅಥವಾ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ 1 ಮಿ. ರೂಬಲ್ಸ್ (13,07,898 ರೂ.) ಕ್ಯಾಶ್ ಕೊಡುವುದಾಗಿ ಹೇಳಿದ್ದಾರೆ.
ಕೆಲ ವರದಿಗಳ ಪ್ರಕಾರ, ಉಕ್ರೇನ್ ಜತೆ ಯುದ್ಧ, ಕೊರೋನಾದಿಂದಾಗಿ ರಷ್ಯಾದಲ್ಲಿ ಜನಸಂಖ್ಯೆ ಕುಸಿದಿದೆ. ಭಾರತಕ್ಕೆ ಹೋಲಿಸಿದರೆ ರಷ್ಯಾ 6 ಪಟ್ಟು ದೊಡ್ಡದು. ಅಲ್ಲಿನ ಜನಸಂಖ್ಯೆ ಮಾತ್ರ 14.47 ಕೋಟಿ. 2021ಕ್ಕೆ ಹೋಲಿಸಿದರೆ ಶೇ. 0.27 ಕಡಿಮೆ. ರಷ್ಯಾದಲ್ಲಿ ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದೇ ಸರ್ಕಾರದ ಚಿಂತೆಯಾಗಿದ್ದು, ಈ ಹಿನ್ನೆಲೆ ಈ ರೀತಿಯ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.




