ಹಾಸನ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿ ಹಾಗೂ ಡಾ.ಮಂಜುನಾಥ ಅವರನ್ನು ಗೆಲ್ಲಿಸಿದ್ದು ನಾನೇ ಅಂತಾರೆ. ಹಾಗಿದ್ದರೆ ಅವರ ಹೈಕಮಾಂಡನಿಂದ ಬಿ ಫಾರಂ ಪಡೆದು ಯಾಕೆ ಚುನಾವಣೆಗೆ ನಿಲ್ಲಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಹಾಸನಾಂಬೆ ದರ್ಶನ ಬಳಿಕ ಮಾತಾಡಿದ ಅವರು, ಹಾಸನಾಂಬೆ ದರ್ಶನ ಮಾಡಿ ಹೇಳ್ತಾ ಇದ್ದೀನಿ ಬರೆದಿಟ್ಟುಕೊಳ್ಳಿ. ಚನ್ನಪಟ್ಟಣದಿಂದ ಅವರ ಅವನತಿ ಆರಂಭವಾಗುತ್ತೆ. ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಸಮನ್ವಯದ ಕೊರತೆ ಇರೋದು ಕಾಂಗ್ರೆಸ್‌ನಲ್ಲಿ ಎಂದು ಹೇಳಿದ್ದಾರೆ.
ಉಪಚುನಾವಣೆ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗಿದೆ. ಚನ್ನಪಟ್ಟಣ ವಿಷಯದಲ್ಲಿ ವಿರೋಧಿಗಳು ಕೊಡ್ತಿರುವ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಜನರೇ ಉತ್ತರ ಕೊಡ್ತಾರೆ. ಜನರು ನಿಖಿಲ್ ಕುಮಾರಸ್ವಾಮಿ ಅವರನ್ನು ಅಭಿಮನ್ಯು ಮಾಡುವುದಿಲ್ಲ ಅರ್ಜುನನ ಪಾತ್ರ ಕೊಡ್ತಾರೆ. ಖಂಡಿತ ಏನೇ ಕುತಂತ್ರ ಮಾಡಿದರು ಕೂಡ ಜನರು ಮಗನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು (ಯೋಗೇಶ್ವರ್) ಚುನಾವಣೆ ಮುಗಿದೇ ಹೋಗಿದೆ ಅಂದುಕೊಂಡಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಜನರು ತೀರ್ಮಾನ ಮಾಡ್ತಾರೆ. ಚನ್ನಪಟ್ಟಣ ಮೊದಲಿಂದಲೂ ಜೆಡಿಎಸ್ ಕೋಟೆ ಅದು. ನಮ್ಮಲ್ಲಿನ ಕೆಲ ತಪ್ಪಿನಿಂದ ಹಿನ್ನಡೆ ಆಗಿತ್ತು. ಅದನ್ನ ಸರಿ ಮಾಡಲು ನನ್ನನ್ನ ರಾಮನಗರ ದಿಂದ ಚನ್ನಪಟ್ಟಣಕ್ಕೆ ಕರೆದೊಯ್ದರು. ಈಗ ಎಲ್ಲವು ಕೂಡ ಸರಿಯಾಗಿದೆ ಎಂದರು.
ಕುಮಾರಸ್ವಾಮಿ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದರು ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.