ಚಿತ್ರದುರ್ಗ: ಬಳ್ಳಾರಿ ಬಳಿಕ ಚಿತ್ರದುರ್ಗದಲ್ಲೂ ಬಾಣಂತಿ ಸಾವು ಸಂಭವಿಸಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಳ್ಳಕೆರೆ ತಾಲ್ಲೂಕಿನ ಜಾಗನೂರಹಟ್ಟಿ ಗ್ರಾಮದ ರೋಜಮ್ಮ(25) ಮೃತ ದುರ್ದೈವಿ ಬಾಣಂತಿಯಾಗಿದ್ದಾರೆ.
ಕಳೆದ ಅಕ್ಟೋಬರ್ 31 ರಂದು ರೋಜಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಮೂರನೇ ಮಗುವಿಗೆ ಜನ್ಮ ನೀಡಿದ್ದರು. ಜಿಲ್ಲಾಸ್ಪತ್ರೆಯ ಡಾ. ರೂಪಶ್ರೀ ಸಿಜೇರಿಯನ್ ಮೂಲಕ ಡೆಲಿವರಿ ಆಗಿದ್ದ ಹಿನ್ನಲೆ ಹೊಲಿಗೆ ಹಾಕಿದ್ದ ಭಾಗದಲ್ಲೇ ನೋವು ಕಾಣಿಸಿಕೊಂಡಿದೆ.
ಹೊಲಿಗೆ ಹಾಕಿದ್ದ ಭಾಗದಲ್ಲಿ ಇನ್ಫೆಕ್ಷನ್ ಆಗಿದ್ದು, ಬಾಣಂತಿ ರೋಜಮ್ಮಗೆ ವಾಂತಿ, ಭೇದಿ ಹಾಗೂ ಹೊಟ್ಟೆ ನೋವು ಇದ್ದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಂಗಳವಾರ ಆರೋಗ್ಯದಲ್ಲಿ ಏರುಪೇರಾಗಿ ರೋಜಮ್ಮ ಕೊನೆಯುಸಿರೆಳೆದಿದ್ದು, 40 ದಿನದ ಮಗು ತಾಯಿ ಕಳೆದುಕೊಂಡು ತಬ್ಬಲಿಯಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಗಿ ಕುಟುಂಬಸ್ಥರು, ಸಂಬಂಧಿಕರು ಆರೋಪಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.