ನವದೆಹಲಿ : ಸಾಮಾಜಿಕ ಮಾಧ್ಯಮದ ದುರುಪಯೋಗಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಅದರ ನಿಯಂತ್ರಣಕ್ಕಾಗಿ ಗುರುವಾರ ಹೊಸ ನೀತಿಯನ್ನು ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ದೇಶದಲ್ಲಿ ಡಿಜಿಟಲ್ ವಿಷಯದ ನಿಯಂತ್ರಣಕ್ಕಾಗಿ 3 ತಿಂಗಳಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಿಂದ ಅಶಾಂತಿ ಸೃಷ್ಟಿ:
‘ಸಾಮಾಜಿಕ ಜಾಲತಾಣ ಅಶಾಂತಿ ಸೃಷ್ಟಿಸುತ್ತಿದೆ ಮತ್ತು ಅಸತ್ಯಗಳನ್ನು ಹರಡುತ್ತಿದೆ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ‘ಇಂಥ ಬರಹಗಳನ್ನು ತಡೆಯಲಾಗುವುದು. ನಕಲಿ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ಹಿಂಸಾಚಾರವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ. ‘ಟ್ವಿಟ್ಟರ್ ಮತ್ತು ಫೇಸ್ಬುಕ್ ಕಂಪನಿಗಳು ಭಾರತೀಯ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ, ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.