ಮಹಾರಾಷ್ಟ್ರ: ಸರಿಯಾಗಿ 7 ದಿನಗಳ ಹಿಂದೆ. ಡಿಸೆಂಬರ್ 21 ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಕೇಳರಿಯದ ಭೀಕರ ಅಪಘಾತ ಸಂಭವಿಸಿತ್ತು. ಕಂಟೇನರ್ ಒಂದು ವೋಲ್ವೋ ಕಾರಿನ ಮೇಲೆ ಬಿದ್ದಿದ್ದು ಕಾರು ಜಖಂಗೊಂಡು ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಅಪ್ಪಚ್ಚಿಯಾಗಿದ್ದರು. ಚಂದ್ರಮ್ ಕುಟುಂಬದ ಈ ದುರಂತ ಕರುಣಾಜನಕವಾಗಿದ್ದು, ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.
ಚಂದ್ರಮ್ ಯೋಗಪ್ಪಗೊಳ್ ಅವರು IAST ಸಾಫ್ಟ್‌ವೇರ್ ಸಲ್ಯೂಷನ್ಸ್‌ನ ಎಂಡಿ, ಸಿಇಒ ಆಗಿದ್ದರು. 5 ವರ್ಷದ ಹಿಂದೆ ಚಂದ್ರಮ್ ಈ ಕಂಪನಿಯನ್ನ ಆರಂಭ ಮಾಡಿದ್ದರು. ಯಶಸ್ವಿಯಾಗಿ ನಡೆಯುತ್ತಿದ್ದ ಈ ಕಂಪನಿಯಲ್ಲಿ 150ಕ್ಕೂ ಹೆಚ್ಚು ಕೆಲಸಗಾರರು ಇದ್ದರು. ಮಹಾರಾಷ್ಟ್ರದ ತಮ್ಮ ಊರಿಗೆ ಹೋಗಿ ಬರ್ತೀನಿ ಎಂದು ಹೊರಟವರಿಗೆ ಈ ರೀತಿ ದುರಂತ ಸಾವಾಗಿತ್ತು.
ಇದೀಗ ಅಪಘಾತದಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಸಾವಿನಿಂದ ಆಘಾತಗೊಂಡಿದ ವ್ಯಕ್ತಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಮೃತ ಚಂದ್ರಾಮ್ ತಂದೆ ಈರಗೊಂಡ ಏಗಪ್ಪಗೊಳ (80) ನಿಧನರಾಗಿದ್ದಾರೆ. ಕುಟುಂಬ ಸದಸ್ಯರ ಸಾವಿನಿಂದ ಆಘಾತಕ್ಕೊಳಕ್ಕಾಗಿದ್ದ ಈರಗೊಂಡ ಶನಿವಾರ ಸಂಜೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ನಿಧನರಾಗಿದ್ದಾರೆ.
ಅಪಘಾತದಲ್ಲಿ ಚಂದ್ರಾಮ್, ಗೌರಾಬಾಯಿ, ದೀಕ್ಷಾ, ಧ್ಯಾನ್, ವಿಜಯಲಕ್ಷ್ಮಿ, ಆರ್ಯ ಸಾವನಪ್ಪಿದ್ದರು. ಘಟನೆ ಬಳಿಕ ಆಘಾತದಲ್ಲಿದ್ದ ಈರಗೊಂಡ ಅನಾರೋಗ್ಯದ ಜೊತೆ ಕುಟುಂಬಸ್ಥರ ಸಾವಿನಿಂದ ನೊಂದಿದ್ದು ಅದೇ ಕೊರಗಿನಲ್ಲೇ ಕೊನೆಯುಸಿರೆಳೆದಿದ್ದಾರೆ.