ಭಟ್ಕಳ: ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಹಿಂದೆ ಇದೆ. ಜಿಲ್ಲೆಯಲ್ಲಿ ಕಡಲ ತೀರದಲ್ಲಿ ಒಂದು ಫೈವ್ ಸ್ಟಾರ್ ಹೋಟೆಲ್ ಇಲ್ಲ. ಪ್ರವಾಸೋದ್ಯಮ ಯಾಕೆ ಬೆಳೆಯುತ್ತಿಲ್ಲ ಎಂದು ಮನಗಂಡು ಸರ್ಕಾರ ಪ್ರವಾಸೋದ್ಯಮ ಅಭಿವೃದ್ದಿಪಡಿಸಲು ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಮುರ್ಡೇಶ್ವರದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕರಾವಳಿ ಪ್ರದೇಶಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರವಾಸೋದ್ಯಮ ನೀತಿ ಮಾಡಿದ್ದು, ಕರಾವಳಿ ಜಿಲ್ಲೆಯ ಮೂರೂ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಅವರು ಸಲಹೆ ನೀಡಿದ್ದು, ಪ್ರವಾಸೋದ್ಯಮವನ್ನು ದೊಡ್ಡ ಉದ್ಯಮ ಮಾಡಲು ಸರ್ಕಾರ ಪ್ರಯತ್ನಿಸಲಿದ್ದೇವೆ ಎಂದರು.
ನಮ್ಮಲ್ಲಿ ಕಡಲಿದ್ದು ಬಂದರು ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡುತ್ತೇವೆ. ಬೇರೆ ರಾಜ್ಯದಲ್ಲಿ ಇರದ ಸಂಪತ್ತು ನಮ್ಮ ರಾಜ್ಯದಲ್ಲಿದೆ. ಅದನ್ನ ಬಳಸಿಕೊಂಡು ಸರ್ಕಾರ ಅಭಿವೃದ್ಧಿ ಮಾಡುತ್ತೇವೆ. ಅಲ್ಲದೇ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.
ಕರಾವಳಿ ಪ್ರದೇಶದ ಜನರು ತಮ್ಮ ಕಾಲು ಮೇಲೆ ನಿಂತು ಬದುಕಲು ಮೀನುಗಾರರಿಗೆ ಸರ್ಕಾರ ಕೆಲ ಯೋಜನೆ ಜಾರಿಗೆ ತರುತ್ತಿದೆ. ಸರ್ಕಾರ ಮೀನುಗಾರರ ಪರ ಇದೆ. ಸದ್ಯ ಕಡಲಿನಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಮೃತರಾಗುವ ಮೀನುಗಾರರ ಕುಟುಂಬಕ್ಕೆ 8 ಲಕ್ಷ ಪರಿಹಾರ ಹಣ ನೀಡುತ್ತಿದ್ದು ಅದನ್ನು ಸರ್ಕಾರ ಹತ್ತು ಲಕ್ಷಕ್ಕೆ ಏರಿಸುತ್ತೇವೆ ಎಂದರು.
ಸಮೀಕ್ಷೆ ಪ್ರಕಾರ ಶೇಕಡಾ 99 ರಷ್ಟು ಮೀನುಗಾರರು ಸಂಕಷ್ಟದಲ್ಲಿದ್ದಾರೆ ಎನ್ನಲಾಗಿದೆ. ಸರ್ಕಾರ ಎಲ್ಲಾ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ರೈತರನ್ನು ಬದುಕಿಸಲು ಹೇಗೆ ಸಂಕಲ್ಪ ಇಟ್ಟುಕೊಂಡಿದೆಯೋ, ಅದೇ ರೀತಿ ಮೀನುಗಾರರನ್ನು ಬದುಕಿಸಲು ಅವರ ಪರ ಗಟ್ಟಿಯಾಗಿ ನಿಲ್ಲಲಿದೆ.
ಈ ಹಿಂದೆ ಮೀನುಗಾರಿಕೆ ಇಲಾಖೆ ಬೇರೆಯವರಿಗೆ ಸಚಿವ ಸ್ಥಾನ ನೀಡಲಾಗುತ್ತಿತ್ತು. ಮೀನುಗಾರರ ನೋವು ಸಚಿವರಿಗೆ ತಿಳಿಯಲಿ ಎಂದು ಅದೇ ಸಮುದಾಯದ ಮಂಕಾಳ ವೈದ್ಯರನ್ನು ಸಚಿವರನ್ನಾಗಿ ಮಾಡಿದ್ದೇವೆ ಎಂದರು.
ಗ್ಯಾರಂಟಿ ಎಲ್ಲರಿಗೂ ಉತ್ತಮ ಬದುಕು ಕಲ್ಪಿಸಲಿ ಎಂದು ಮಾಡಿದ್ದೆವು. ಬೆಲೆ ಏರಿಕೆಯಿಂದ ತತ್ತರಿಸಿರುವವರಿಗೆ ಈ ಗ್ಯಾರಂಟಿ ಸಾಕಷ್ಟು ಉಪಯೋಗವಾಗಿದೆ. ಇದನ್ನು ಟೀಕಿಸುತ್ತಿದ್ದ ಬಿಜೆಪಿ ಬೇರೆ ರಾಜ್ಯದಲ್ಲಿ ತಾವು ಗ್ಯಾರಂಟಿ ಕೊಡುತ್ತೇವೆ ಎಂದು ನಮಗೆ ಇದು ಹೆಮ್ಮೆ ಇದ್ದು ದೇಶದಲ್ಲಿಯೇ ಮಾದರಿ ಸರ್ಕಾರ ಕರ್ನಾಟಕ ಸರ್ಕಾರವಾಗಿದೆ ಎಂದರು.