VP ನ್ಯೂಸ್ ಡೆಸ್ಕ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನು ಪೂಜೆ ಮಾಡಲಾಗುತ್ತದೆ. ಹಣ ಲಕ್ಷ್ಮಿಯ ಪ್ರತಿರೂಪ ಎಂದು ಹಬ್ಬದ ಸಂದರ್ಭದಲ್ಲಿ ದೇವರೆದುರು ಹಣವನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಹಬ್ಬದ ದಿನದಂದು ಹಣಕ್ಕೆ ಬೆಂಕಿ ಹಾಕಿ ವೀಡಿಯೋ ಮಾಡಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ 100, 500 ರೂ ಮುಖಬೆಲೆಯ ನೋಟುಗಳನ್ನು ಒಂದೆಡೆ ರಾಶಿ ಹಾಕಲಾಗಿದೆ. ಅಲ್ಲದೇ ಅದೇ ನೋಟುಗಳಿಗೆ ಬೆಂಕಿ ಹಾಕಿ ವೀಡಿಯೋ ಮಾಡಿದ್ದು, ಈ ವೀಡಿಯೋಗೆ ನೆಟ್ಟಿಗರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಹಣಕ್ಕೆ ಬೆಂಕಿ ಹಾಕಿ ಈ ರೀತಿ ವೀಡಿಯೋ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆದರೆ ಈ ವೀಡಿಯೋವನ್ನು ಸರಿಯಾಗಿ ಗಮನಿಸಿದರೆ ವೀಡಿಯೋದಲ್ಲಿ ಕಾಣುತ್ತಿರುವ ನೋಟುಗಳು ಅಸಲಿ ಅಲ್ಲ ಅನ್ನೋದು ತಿಳಿಯುತ್ತದೆ. ನೋಟಿನಲ್ಲಿ Reserve Bank of India ಇರಬೇಕಾದ ಜಾಗದಲ್ಲಿ Childrens Bank Of India ಎಂದು ಇರುವುದು ಕಾಣಿಸುತ್ತದೆ. ಅಲ್ಲದೇ 500ರ ನೋಟಿನ ಮೇಲೆ FULL OF FUN ಎಂದು ಮುದ್ರಿಸಲಾಗಿದೆ. ಹೀಗಾಗಿ ಈ ನೋಟುಗಳು ಅಸಲಿಯಂತೆ ಕಾಣುವ ಮಕ್ಕಳ ಆಟಿಕೆಯ ನೋಟುಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮಾಷೆಗಾಗಿ ಹಾಕಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.