ಬಾಗಲಕೋಟೆ: ಪರಿಶಿಷ್ಟ ಪಂಗಡ ಮತ್ತು 2ಎ ಮೀಸಲಾತಿ ಸಂಬಂಧಪಟ್ಟಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ವರದಿ ತರಿಸಿಕೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ
ಇನ್ನು ಬಾಗಲಕೋಟೆಯಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದು, ಕುರುಬ ಸಮುದಾಯ ಎಸ್ಟಿ ಮೀಸಲಾತಿ ಪರವಾಗಿ ನಾನಾಗಿಯೇ ನಿರ್ಧಾರ ತೆಗೆದುಕೊಂಡಿದ್ದಲ್ಲ. ಕುರುಬ ಸಮುದಾಯಕ್ಕೆ ಎಸ್ಟಿ ಸಿಗಬೇಕೆಂಬ ಉದ್ದೇಶದಿಂದ ಸಮುದಾಯದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ಹಾಗು ಈಶ್ವರನಾನಂದ ಪುರಿ ಸ್ವಾಮಿಗಳು ಹೋರಾಟ ಶುರು ಮಾಡಿದರು. ಆದರೆ ಸಿದ್ದರಾಮಯ್ಯ ಅವರು ಮೀಸಲಾತಿ ಹೋರಾಟಕ್ಕೆ ಆರ್ ಎಸ್ ಎಸ್ ನವರು ದುಡ್ಡು ಕೊಟ್ಟಿದ್ದಾರೆ ಎಂದು ಹೇಳಿದ್ದು ನಮಗೆಲ್ಲರಿಗೂ ನೋವಾಗಿದೆ ಎಂದು ಹೇಳಿದ್ದಾರೆ.
ಕುರುಬ ಸಮುದಾಯ ಎಸ್ಟಿ ಮೀಸಲಾತಿ ಹೋರಾಟಕ್ಕೆ ಸ್ವಾಮೀಜಿಗಳು ಮೊದಲು ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದರು. ಆಗ ಸಿದ್ದರಾಮಯ್ಯ ಅವರು ನೀವು ಹೋರಾಟ ಮಾಡಿ ನಾನು ಬೆಂಬಲ ಕೊಡ್ತೀನಿ, ಆದರೆ ಹೋರಾಟದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದರು. ಹೀಗೆ ಯಾಕೆ ಈ ರೀತಿಯಾದ್ರೋ ಗೊತ್ತಿಲ್ಲ ಎಂದು ಸಚಿವ ಈಶ್ವರಪ್ಪ ಟೀಕಿಸಿದ್ದಾರೆ.
ಇನ್ನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು, ‘ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು. ಒತ್ತಡ ಹಾಕಿ ಮೀಸಲಾತಿಯನ್ನು ಪಡೆದುಕೊಳ್ಳಲು ಆಗುವುದಿಲ್ಲ. ಈಗ ಶ್ರೀಮಂತರಿಗೆ ಮೀಸಲಾತಿ ಮುಂದುವರೆಯುತ್ತಿದೆ. ಇದು ದುರ್ದೈವ. ಹೀಗೆ ಲಾಭ ಪಡೆದವರಿಗೆ ಮೀಸಲಾತಿ ರದ್ದು ಮಾಡಬೇಕು. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಬೇಕಿದೆ’ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.