ಕಾರವಾರ: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡು ಕಾರವಾರದಲ್ಲಿ ಆತಂಕ ಸೃಷ್ಟಿಸಿದ್ದ ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರಣಹದ್ದಿನ ಕುರಿತಾದ ಆತಂಕಕ್ಕೆ ತೆರೆಎಳೆದಿದ್ದಾರೆ.
ಭಾನುವಾರ ಮಧ್ಯಾಹ್ನ ವೇಳೆಗೆ ನಗರದ ಕೋಡಿಭಾಗದ ನದಿವಾಡದಲ್ಲಿ ರಣಹದ್ದೊಂದು ಕಾಣಿಸಿಕೊಂಡಿದ್ದು, ಅದರ ಎರಡೂ ಕಾಲುಗಳಲ್ಲಿ ಇಂಗ್ಲೀಷ್ ಅಕ್ಷರಗಳಿರುವ ಟ್ಯಾಗ್‌ಗಳಿರುವುದು ಪತ್ತೆಯಾಗಿತ್ತು. ಅಲ್ಲದೇ ಬೆನ್ನಿನ ಮೇಲೆ ಜಿಪಿಎಸ್ ಟ್ರ್ಯಾಕರ್ ರೀತಿಯ ಎಲೆಕ್ಟ್ರಾನಿಕ್ ವಸ್ತು ಅಳವಡಿಸಿರುವುದು ಕಂಡುಬಂದಿದ್ದು, ಗೂಢಾಚಾರಿಕೆಗೆ ಬಳಕೆಯಾಗಿರುವ ಆತಂಕ ಸ್ಥಳೀಯರಿಂದ ವ್ಯಕ್ತವಾಗಿತ್ತು.
ಇದನ್ನೂ ಓದಿ: Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!
ಈ ಹಿನ್ನಲೆ ಸ್ಥಳಕ್ಕೆ ದೌಡಾಯಿಸಿದ ಕಾರವಾರ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ಪರಿಶೀಲನೆ ನಡೆಸಿದ್ದರು. ಕ್ಯಾಮೆರಾದಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿ ಕಾಲಿನ ಮೇಲಿರುವ ಟ್ಯಾಗ್ ಕುರಿತು ಮಾಹಿತಿ ಕಲೆಹಾಕಿದ್ದು, ಈ ವೇಳೆ ಮಹಾರಾಷ್ಟ್ರ ಅರಣ್ಯ ಇಲಾಖೆ ಎಂದು ಬರೆದಿರುವುದು ಪತ್ತೆಯಾಗಿತ್ತು.
ರಣಹದ್ದಿನ ಚಲನವಲನದ ಅಧ್ಯಯನದ ದೃಷ್ಟಿಯಿಂದ ಮಹಾರಾಷ್ಟ್ರ ಅರಣ್ಯ ಇಲಾಖೆ ಟ್ಯಾಗ್ ಅಳವಡಿಸಿದ್ದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ರಣಹದ್ದಿಗೆ ತೊಂದರೆ ನೀಡದೇ ಹಾರಿಹೋಗಲು ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದಾರೆ.