ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಬಸ್‌ವೊಂದು ಬೆಂಕಿಗಾಹುತಿಯಾದ ಘಟನೆ ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಬಳಿ ನಡೆದಿದೆ. ಕೈಗಾದಲ್ಲಿರುವ ಅಣುವಿದ್ಯುತ್ ಸ್ಥಾವರದ ಟೌನ್‌ಶಿಪ್ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕೈಗಾದಿಂದ ಕದ್ರಾದಲ್ಲಿರುವ ಕೈಗಾ ಉದ್ಯೋಗಿಗಳ ಟೌನ್‌ಶಿಪ್‌ಗೆ ಖಾಸಗಿ ಬಸ್ ಮೂಲಕ ಸಿಬ್ಬಂದಿಯನ್ನು ಕರೆತರಲಾಗುತ್ತಿತ್ತು. ಬಸ್ ವಿರ್ಜೆ ಗ್ರಾಮದ ಬಳಿ ಬರುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಸಿಬ್ಬಂದಿ ಕೂಡಲೇ ಬಸ್‌ನಿಂದ ಇಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
ಅದೃಷ್ಟವಶಾತ್ ಕೈಗಾ ಉದ್ಯೋಗಿಗಳು ಅಗ್ನಿಅವಘಡದಿಂದ ಪಾರಾಗಿದ್ದು, ಕೈಗಾ ಅಣುವಿದ್ಯುತ್ ಸ್ಥಾವರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕದ್ರಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.