ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ

ಚಿಕ್ಕಬಳ್ಳಾಪುರ: ತನ್ನ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.…

ಚಿಕ್ಕಬಳ್ಳಾಪುರ: ತನ್ನ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳ ಕೈಯಿಂದ ಯೋಗಶಿಕ್ಷಕಿ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾಳೆ.

ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯವರಾದ ಯೋಗ ಶಿಕ್ಷಕಿ ಸುಲೋಚನಾ ಅಪಹರಣವಾಗಿದ್ದ ಮಹಿಳೆ. ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಈಕೆ ಅಪಹರಣಕ್ಕೆ ಸುಪಾರಿ ನೀಡಿದ್ದು ಬಿಂದು ಎಂಬ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಈಗ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ,

ಬಿಂದು ತನ್ನ ಪತಿ ಸಂತೋಷ್ ಕುಮಾರ್ ಜೊತೆ ಯೋಗ ಶಿಕ್ಷಕಿ ಸುಲೋಚನಾ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕೆ ವ್ಯಕ್ತಪಡಿಸಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ, ಮಾಜಿ ಯೋಧನೂ ಆಗಿರುವ ಸತೀಶ್‌ರೆಡ್ಡಿ ಎಂಬಾತನಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದಳು.

Vijayaprabha Mobile App free

ಅದರಂತೆ ಸತೀಶ್ ರೆಡ್ಡಿ ಯೋಗ ಕಲಿಯುವ ನೆಪದಲ್ಲಿ ಸುಲೋಚನಾಳ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದ. ನಂತರ ಗನ್ ಶೂಟಿಂಗ್‌ ತರಬೇತಿ ನೀಡುವುದಾಗಿ ನಂಬಿಸಿ ಸುಲೋಚನಾಳನ್ನು ಅ.23 ರಂದು ಅಪಾರ್ಟ್‌ಮೆಂಟ್‌ನಿಂದ ಕರೆದೊಯ್ದಿದ್ದ. ತನ್ನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರನ ಜೊತೆ ಸೇರಿ ಸುಲೋಚನಾ ಕಾರಿನಲ್ಲಿ ಹೊರಟಿದ್ದು, ಇಡೀ ದಿನ ಬೆಂಗಳೂರಿನ ಹಲವು ಕಡೆ ಸುತ್ತಾಡಿ ಕೊನೆಗೆ ರಾತ್ರಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಧನಮಿಟ್ಟೇನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸುಲೋಚನಾಳನ್ನು ಕಾರಿನಿಂದ ಇಳಿಸಿ ಹಲ್ಲೆ ನಡೆಸಿ, ಅರೆಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರಕ್ಕೂ ಯತ್ನಿಸಲಾಗಿದೆ. ಶಿಕ್ಷಕಿ ಪ್ರತಿರೋಧ ತೋರಿದಾಗ ಕೊನೆಗೆ ಕಾರಿನಲ್ಲಿದ್ದ ಚಾರ್ಜರ್ ವೈರ್ ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಲಾಗಿದೆ. ಯೋಗ ಶಿಕ್ಷಕಿಯಾಗಿದ್ದ ಆಕೆ ಆ ವೇಳೆ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿ ಉಸಿರು ಬಿಗಿದು ಹಿಡಿದುಕೊಂಡಿದ್ದಳು. ಸುಲೋಚನಾ ಸತ್ತೇ ಹೋಗಿದ್ದಾಳೆಂದು ಭಾವಿಸಿ ಆರೋಪಿಗಳು ಗುಂಡಿ ತೋಡಿ ಆಕೆ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದ ಸುಲೋಚನಾ ಬೆಳಗ್ಗೆ ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಳು.

ಸುಲೋಚನಾ ದೂರಿನನ್ವಯ ದಿಬ್ಬೂರಹಳ್ಳಿ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಅಪಹರಿಸಿದ್ದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ಸೇರಿ ಶಿಕ್ಷಕಿಯನ್ನು ಅಪಹರಿಸಿ ಕೊಲೆ ಮಾಡಲು ಕೊಪ್ಪಳದಿಂದ ಕಾರು ಕಳವು ಮಾಡಿಕೊಟ್ಟಿದ್ದ ಅಪ್ರಾಪ್ತ ಬಾಲಕನನ್ನೂ ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ವಿಶೇಷ ತನಿಖಾ ತಂಡ ರಚಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.