ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಕೈಗಾ ಅಣುವಿದ್ಯುತ್ ಸ್ಥಾವರದ ರಕ್ಷಣಾ ಸಿಬ್ಬಂದಿಯೋರ್ವ ತನ್ನದೇ ಬಂದೂಕಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಹಾರ ಮೂಲದ ಸಿಐಎಸ್‌ಎಫ್ ಸಿಬ್ಬಂದಿ ಅರವಿಂದ್ ಆತ್ಮಹತ್ಯೆಗೆ ಶರಣಾದ ರಕ್ಷಣಾ ಸಿಬ್ಬಂದಿಯಾಗಿದ್ದಾನೆ.
ರಕ್ಷಣಾ ಸಿಬ್ಬಂದಿ ಅರವಿಂದ್ ಸೋಮವಾರ ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಡ್ಯೂಟಿ ಮುಗಿಯಲು ಕೆಲವೇ ಕ್ಷಣಗಳು ಇರುವಾಗ ಅರವಿಂದ್ ತನ್ನದೇ ಕೈಯಲ್ಲಿದ್ದ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಪರಿಣಾಮ ತಲೆ ಛಿದ್ರವಾಗಿದ್ದು, ಸಿಐಎಸ್ಎಫ್ ರಕ್ಷಣಾ ಸಿಬ್ಬಂದಿ ಕೃತ್ಯದಿಂದ ಕೈಗಾ ಘಟಕದಲ್ಲಿ ಆತಂಕ ಸೃಷ್ಟಿಸಿದೆ.
ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ವೈಯಕ್ತಿಕ ಸಮಸ್ಯೆ ಕಾರಣವಾಗಿತ್ತಾ ಅಥವಾ ಕರ್ತವ್ಯದ ವೇಳೆ ಅಧಿಕಾರಿಗಳಿಂದ ಏನಾದರೂ ಕಿರುಕುಳವಿತ್ತಾ ಎನ್ನುವ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕದ್ರಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಸಿಬ್ಬಂದಿ ಆತ್ಮಹತ್ಯೆಯ ಕುರಿತು ತನಿಖೆ ಮುಂದುವರೆಸಿದ್ದಾರೆ.