ಲಕ್ನೋ: ಉತ್ತರ ಪ್ರದೇಶದ ಸೀತಾಪುರದಲ್ಲಿ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯಾದ ಪತ್ರಕರ್ತನನ್ನು ರಾಘವೇಂದ್ರ ಬಾಜ್ಪೈ(35) ಎಂದು ಗುರುತಿಸಲಾಗಿದೆ.
ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ರಾಘವೇಂದ್ರನನ್ನು ಹೊಂಚು ಹಾಕಿ ದಾಳಿಯಿಂದ ಹೊಡೆದು ಕೊಲ್ಲಲಾಯಿತು. ಆತನ ಬೈಕ್‌ಗೆ ಡಿಕ್ಕಿ ಹೊಡೆದು ಕೆಡವಿದ್ದು ನಂತರ ಮೂರು ಬಾರಿ ಗುಂಡು ಹಾರಿಸಲಾಯಿತು. ಮೂರು ಗುಂಡುಗಳು ಪತ್ರಕರ್ತನ ದೇಹವನ್ನು ಹೊಕ್ಕಿದ್ದು, ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸದ್ಯ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತ ರಾಘವೇಂದ್ರ ಹಿಂದಿ ದಿನಪತ್ರಿಕೆಯೊಂದರಲ್ಲಿ ಸ್ಥಳೀಯ ವರದಿಗಾರರಾಗಿದ್ದರು, ಮತ್ತು ಆರ್ಟಿಐ ಕಾರ್ಯಕರ್ತರೂ ಆಗಿದ್ದರು. ಆರೋಪಿಯನ್ನು ಬಂಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.