ಕಾರವಾರ: ದತ್ತು ಕಾರ್ಯಕ್ರಮವು 2015ರ ಅಗಸ್ಟ್ ತಿಂಗಳಿಂದ ಆನ್ ಲೈನ್ ಆಧಾರಿತವಾಗಿದ್ದು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಂತ್ರಣಕ್ಕೊಳಪಟ್ಟ ಭಾರತದಾದ್ಯಂತ ಏಕರೂಪಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಕಳೆದ 4 ವರ್ಷಗಳಿಂದ ಸತತವಾಗಿ ದತ್ತು ಕಾರ್ಯಕ್ರಮ ಮೂಲಕ ಮಕ್ಕಳನ್ನು ದತ್ತು ನೀಡುವಿಕೆಯಲ್ಲಿ ರಾಷ್ಟ್ರದಲ್ಲಿ 2ನೇ ಸ್ಥಾನ ಪಡೆದಿದೆ.
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷವು ನವೆಂಬರ್ ಮಾಸವನ್ನು ಅಂತರಾಷ್ಟ್ರೀಯ ದತ್ತು ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉತ್ತರಕನ್ನಡ, ಕಾರವಾರ ರವರಿಂದ ದತ್ತು ಮಾಸಾಚರಣೆ ಅಂಗವಾಗಿ ಸಾರ್ವಜನಿಕರಿಗೆ ದತ್ತು ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದ್ದು, ಬಾಲನ್ಯಾಯ ಕಾಯಿದೆ 2015ರಡಿಯಲ್ಲಿ ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯಬಹುದಾಗಿದೆ.
ಯಾವ ಮಕ್ಕಳು ದತ್ತುಗೆ ಅರ್ಹರು: ಯಾವುದೇ ಅನಾಥ ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿರವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆ ಮಕ್ಕಳು ದತ್ತಕ್ಕೆ ಅರ್ಹರಾಗಿರುತ್ತಾರೆ.
ಯಾರು ಮಕ್ಕಳನ್ನು ದತ್ತು ಪಡೆಯಲು ಅರ್ಹರು: ದತ್ತು ಪಡೆಯಲು ಇಚ್ಛಿಸುವವರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು ಮತ್ತು ಆರ್ಥಿಕವಾಗಿ ಮಗುವನ್ನು ಸಾಕುವ ಸಾಮರ್ಥ್ಯ ಹೊಂದಿರಬೇಕು. ಹಾಗೂ ಪೋಷಕರು ನಿಗಧಿತ ವಯೋಮಾನದವರಾಗಿರಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಾಯ ಟ್ರಸ್ಟ್, ನಂ.441, ಮರಾಠಿಕೊಪ್ಪ, ಶಿರಸಿ(ಉ.ಕ) ಈ ಸಂಸ್ಥೆಯು ಸ್ಥಳೀಯ ದತ್ತು ಕೇಂದ್ರವಾಗಿದೆ.
ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯಿದೆ 2015 ಸೆಕ್ಷನ್ 81ರ ಅನ್ವಯ 5 ವರ್ಷಗಳ ಸೆರೆಮನೆ ವಾಸದೊಂದಿಗೆ ರೂ.1 ಲಕ್ಷಗಳವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿಯು 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವೆರೆಗೆ ವಿಸ್ತರಣೆ ಮಾಡಲಾಗುವುದು.
ಇಂತಹ ಅಪರಾಧ ಕಂಡುಬಂದಲ್ಲಿ ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಉತ್ತರ ಕನ್ನಡ, ಕಾರವಾರ. ದೂ:08382-220182 ನ್ನು ಸಂಪರ್ಕಿಸುವಂತೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.